ಎಲ್ಲರ ಚಿತ್ತ ಪಪಂ ಚುನಾವಣೆಯತ್ತ!

18kolar3- vemgal election story
Published on

ಮುನಿರಾಜು ಆರ್​. ವೇಮಗಲ್​

ಕೋಲಾರ ತಾಲೂಕಿನ ವೇಮಗಲ್​&ಕುರುಗಲ್​ ಪಟ್ಟಣ ಪಂಚಾಯಿತಿಯ ಪ್ರಥಮ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಆ.17ರಂದು ಮತದಾನ ನಡೆಯಲಿದೆ. ಮೊಟ್ಟ ಮೊದಲ ಬಾರಿಗೇ ಅಧಿಕಾರ ಗದ್ದುಗೆ ಏರಿಬಿಡುವ ತವಕದಲ್ಲಿರುವ ರಾಜಕೀಯ ಪಕ್ಷಗಳ ವರಸೆ ಮತ್ತು ಹಣಾಹಣಿ ಎಲ್ಲರ ಚಿತ್ತವನ್ನು ಸೆಳೆಯುತ್ತಿದೆ.

ವೇಮಗಲ್​&ಕುರುಗಲ್​ ಪಟ್ಟಣ ಪಂಚಾಯಿತಿಯಾಗಿ 2020ರ ನವೆಂಬರ್​ನಲ್ಲಿ ಘೋಷಣೆಯಾಯಿತಾದರೂ ಚುನಾವಣೆ ಯಾವಾಗ ಎಂಬ ಕಾತರ ಎಲ್ಲರಲ್ಲಿ ಮಡುಗಟ್ಟಿತ್ತು. ಬರೋಬ್ಬರಿ 5 ವರ್ಷದ ನಂತರ ಚುನಾವಣೆ ನಿಗದಿಯಾಗಿದ್ದು, ಇದೀಗ ರಾಜಕೀಯ ಪಕ್ಷಗಳ ಮುಖಂಡರು, ಸ್ಥಳಿಯರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ 17 ವಾರ್ಡ್​ಗಳಿದ್ದು, ಕಾಂಗ್ರೆಸ್​, ಜೆಡಿಎಸ್​&ಬಿಜೆಪಿ ಹಾಗೂ ಪಕ್ಷೇತರ ಸೇರಿ ಒಟ್ಟು 51 ಅಭ್ಯರ್ಥಿಗಳು ಕಣದಲ್ಲಿದ್ದು, 13 ಸಾವಿರಕ್ಕೂ ಹೆಚ್ಚು ಮತದಾರರು 22 ಮತಗಟ್ಟೆಗಳಲ್ಲಿ 17 ವಾರ್ಡ್​ಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಚುನಾವಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ರಾಜಕೀಯ ಮುಖಂಡರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ನಾನಾ ತಂತ್ರ ರೂಪಿಸುತ್ತಿದ್ದಾರೆ. ಕಾರ್ಯಕರ್ತರ ಸಭೆ, ಆರೋಪ ಪ್ರತ್ಯಾರೋಪ, ಸಾಧನೆಗಳ ಪ್ರಚಾರ ಜೋರಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಸ್ಥಳಿಯ ಹಾಗೂ ಬೆಂಗಳೂರಲ್ಲಿರುವ ರಾಜ್ಯ ನಾಯಕರ ಮೊರೆ ಹೋಗಿದ್ದು, ಬೆಂಬಲ ಕೋರುತ್ತಿದ್ದಾರೆ. ಪಕ್ಷದ ಜತೆಗೆ ಜಾತಿ ಲೆಕ್ಕಚಾರದ ಮೇಲೂ ಮತ ಬೇಟೆಯಾಡುತ್ತಿರುವುದು ಕಂಡುಬರುತ್ತಿದೆ.

ಈ ಚುನಾವಣೆ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್​ ಏಕಾಂಗಿ ಹೋರಾಟ ನಡೆಸುತ್ತಿದ್ದು, ಜೆಡಿಎಸ್​&ಬಿಜೆಪಿ ವಾರ್ಡ್​ಗಳನ್ನು ಹಂಚಿಕೆ ಮಾಡಿಕೊಂಡು ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ.

* ಪಕ್ಷಗಳಿಂದ ಸರಣಿ ಸಭೆ

ಪಟ್ಟಣ ಪಂಚಾಯಿತಿ ಚುನಾವಣೆಗೆ ಕೆಲವೇ ದಿನ ಬಾಕಿಯಿದ್ದು, ಕಾಂಗ್ರೆಸ್​, ಎನ್​ಡಿಎ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಆಯಾ ಪಕ್ಷದ ಮುಖಂಡರು ಸರಣಿ ಸಭೆ ನಡೆಸುತ್ತಿದ್ದಾರೆ. ಆರೋಪ&ಪ್ರತ್ಯಾರೋಪದ ಜತೆಗೆ ಆಯಾ ಸರ್ಕಾರದ ಅವಧಿಯ ಸಾಧನೆಗಳನ್ನು ಅಸ್ತ್ರವನ್ನಾಗಿ ಇಟ್ಟುಕೊಂಡು ಮತಬೇಟೆ ಶುರುವಿಟ್ಟುಕೊಂಡಿದ್ದಾರೆ.

* ಆಮಿಷಗಳ ಸುರಿಮಳೆ

ಪಟ್ಟಣ ಪಂಚಾಯಿತಿ ಮೊದಲ ಚುನಾವಣೆ ಆಗಿರುವುದರಿಂದ ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸಿದೆ.

ಸಾಮಾನ್ಯ ವ್ಯಕ್ತಿಗಳಿಗಿಂತ ರಾಜಕೀಯ ಪಕ್ಷಗಳಲ್ಲಿ, ಶಾಸಕರು, ವಿಧಾನ ಪರಿಷತ್​ ಸದಸ್ಯರು, ಪ್ರಭಾವಿ ಮುಖಂಡರು, ರಿಯಲ್​ ಎಸ್ಟೇಟ್​ ಉದ್ಯಮಿಗಳು, ಜಾತಿ ಪ್ರಭಾವ ಉಳ್ಳವರು ಸ್ಪರ್ಧೆ ಮಾಡಿದ್ದು, ಮತದಾರರನ್ನು ಸೆಳೆಯಲು ಮದ್ಯ, ನಗದು, ಚಿನ್ನಾಭರಣ, ಬೆಳ್ಳಿ, ಸಮವಸ್ತ್ರ, ಪ್ರವಾಸ, ಔತಣಕೂಟ ಏರ್ಪಡಿಸುವುದು ಕಂಡುಬರುತ್ತಿದೆ.

* ಪಕ್ಷಾಂತರ ಜೋರು

ಪಂಚಾಯಿತಿ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್​ಗಳಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್​, ವಿಧಾನ ಪರಿಷತ್​ ಅನಿಲ್​ ಕುಮಾರ್​ ಹಾಗೂ ವಿಧಾನ ಪರಿಷತ್​ ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಮೈತ್ರಿ ಪಕ್ಷಗಳ ಪ್ರಭಾವಿಗಳನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮಾಜಿ ಸಚಿವ ವರ್ತೂರು ಪ್ರಕಾಶ್​ ಹಾಗೂ ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಕಾಂಗ್ರೆಸ್​ ಕಾರ್ಯಕರ್ತರನ್ನು ಕೈ ನಾಯಕರನ್ನು ಸೆಳೆಯುವ ಕಸರತ್ತು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net