ಪ್ರತಿಯೊಬ್ಬರಿಗೂ ಕಾನೂನುಗಳ ತಿಳಿವಳಿಕೆ ಅವಶ್ಯ

Legal Awareness programme
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಂಜುನಾಥ ನಾಯಕ್ ಮಾತನಾಡಿದರು. ಎಂ.ಎಸ್.ಸಂತೋಷ್, ಡಾ. ಕವಿತಾ ಯೋಗಪ್ಪನವರ್, ಎಚ್.ಪ್ರಶಾಂತಿ, ರಾಘವೇಂದ್ರ ಸ್ವಾಮಿ, ಬಿ.ಎಸ್.ತಿಮ್ಮೋಲಿ ಇತರರಿದ್ದರು.
Published on

ಶಿವಮೊಗ್ಗ: ಗುರಿ ಸಾಧಿಸಲು ಕಾನೂನಾತ್ಮಕವಾಗಿ ಸರಿದಾರಿಯಲ್ಲಿ ಸಾಗಬೇಕು. ಆಗ ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.

ಶಿವಮೊಗ್ಗದ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಸಭಾಂಗಣದಲ್ಲಿ ನವದೆಹಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿವಮೊಗ್ಗ ವಕೀಲರ ಸಂಘ, ಮಹಾನಗರ ಪಾಲಿಕೆ, ಜಿಲ್ಲಾ ಸ್ವಯಂ ಸೇವಾಸಂಸ್ಥೆಗಳ ಒಕ್ಕೂಟದಿಂದ ಮಹಿಳಾ ಸಬಲೀಕರಣ ಕುರಿತ ಕಾನೂನು ಜಾಗೃತಿ ಕಾರ್ಯಕ್ರಮ, ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಸಂಬಂಧಿಸಿ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಅನೇಕರು ಅವುಗಲ ಬಗ್ಗೆ ಸರಿಯಾದ ಮಾಹಿತಿ ಪಡೆದಿಲ್ಲ. ಆದ್ದರಿಂದ ಮಹಿಳೆಯರಿಗಿರುವ ಕಾನೂನುಗಳು, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ಶಿವಮೊಗ್ಗದಲ್ಲಿ ದಿನೇದಿನೆ ಹೊಸ ಹೊಸ ಬಡಾವಣೆಗಳು ಬೆಳೆಯುತ್ತಿವೆ. ಜತೆಗೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಗಟ್ಟಲು ನಗರದ ಎಲ್ಲ ಬಡಾವಣೆಗಳಲ್ಲಿ ಮಹಾನಗರ ಪಾಲಿಕೆಯಿಂದ ಸಿಸಿ ಟಿವಿ ಅಳವಡಿಸುವ ಅಗತ್ಯವಿದೆ ಎಂದರು.
ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಬಿ.ಎಸ್.ತಿಮ್ಮೋಲಿ ಮಾತನಾಡಿ, ಪ್ರತಿಯೊಬ್ಬರೂ ನೆಲದ ಕಾನೂನುಗಳ ಬಗ್ಗೆ ಸಾಮಾನ್ಯ ತಿಳಿವಳಿಕೆ ಹೊಂದಿದಾಗ ಪ್ರಜ್ಞಾವಂತ ನಾಗರಿಕರಾಗಿ ಬಾಳಲು ಸಾಧ್ಯ. ಈ ದಿಸೆಯಲ್ಲಿ ಮಹಿಳೆಯರು ಸಹ ಕಾನೂನಿನ ಸಾಮಾನ್ಯ ಜ್ಞಾನ ಹೊಂದುವುದು ಅಗತ್ಯ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಟ್ರಸ್ಟ್ ನಿರ್ದೇಶಕ ಕೆ.ಸಿ.ಬಸವರಾಜ್, ವಕೀಲೆ ಎಚ್.ಪ್ರಶಾಂತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶಶಿರೇಖಾ, ಟಿ.ಆರ್.ಅನುಪಮಾ, ನಟರಾಜ್, ಉಷಾರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net