

ಚಿತ್ರದುರ್ಗ: ಅತಿಯಾದ ಮಳೆಯಿಂದ ಗುಡ್ಡ ಕುಸಿದು ಕೇದಾರನಾಥ ಬಳಿ ಸಿಲುಕಿದ್ದ ದುರ್ಗದ ಮೂವರು ಮಹಿಳೆಯರ ಸಹಿತ ಕರ್ನಾಟಕದ ನಲ್ವತ್ತು ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ.
ಕೇದಾರನಾಥ ಸಮೀಪದ 32 ಕಿ.ಮಿ. ದೂರದ ಸೀತಾಪುರದಲ್ಲಿ ತಂಗಿರುವ ಪ್ರವಾಸಿಗರು ಹಿಂತಿರುಗಲು ಸಾಧ್ಯವಾಗುವಂತೆ ಮಾರ್ಗವನ್ನು ಕ್ಲಿಯರ್ ಮಾಡಲಾಗಿದೆ. ಆದರೆ, ಈ ಮಾರ್ಗದಲ್ಲಿ ದೊಡ್ಡ ವಾಹನಗಳ ಸಂಚಾರವಿನ್ನೂ ಸಾಧ್ಯವಾಗುತ್ತಿಲ್ಲ.
ಕರ್ನಾಟಕದಿಂದ ತೆರಳಿದ್ದ 40 ಜನರಲ್ಲಿ 10 ಜನ ಒಂದು ಚಿಕ್ಕ ವಾಹನ ಹಾಗೂ ಮತ್ತೊಂದು ದೊಡ್ಡ ವಾಹನದಲ್ಲಿ 30 ಮಂದಿ ಇದ್ದರು. 40 ಮಂದಿಯಲ್ಲಿ ಹಲವರು ನಡೆದುಕೊಂಡೇ ಕೇದಾರನಾಥ ತಲುಪುವ ಸಾಹಸಕ್ಕೆ ಮುಂದಾಗಿದ್ದಾರೆ. ಇನ್ನೆರೆಡು ದಿನದಲ್ಲಿ ಈ ಮಾರ್ಗ ಸರಿಯಾಗಲಿದೆ.
ಸದ್ಯ ಈಗ ಅಲ್ಲಿ ಮಳೆ ಕಡಿಮೆಯಾಗಿದೆ ಎಂದು, ತಂಡದಲ್ಲಿರುವ ಅಂಬಿಕಾ ಅವರ ಪತಿ ಮಲ್ಲಿಕಾರ್ಜುನ್ ಪತ್ರಿಕೆಗೆ ತಿಳಿಸಿದ್ದಾರೆ. ಒಂದು ವೇಳೆ ಎಲ್ಲರೂ ಕೇದಾರನಾಥಕ್ಕೆ ತೆರಳಿದರೂ ಬದ್ರಿನಾಥಕ್ಕೆ ತೆರಳದೆ ಹೊಸದಿಲ್ಲಿ ಮೂಲಕ ಬೆಂಗಳೂರಿಗೆ ಬರಲಿದ್ದಾರೆಂದು ಮಾಹಿತಿ ನೀಡಿದ್ದಾರೆ.