ರಾಜಕೀಯ ಬಿಟ್ಟರೂ ಸಹಕಾರ ಕ್ಷೇತ್ರ ಬಿಡಲಾರೆ

srinivasgowda
ಕೆ.ಶ್ರೀನಿವಾಸಗೌಡ
Published on

ಕೋಲಾರ: ಸಹಕಾರ ಕ್ಷೇತ್ರಕ್ಕೆ ರಾಜಕೀಯ ನಾಯಕರನ್ನು ಹುಟ್ಟು ಹಾಕುವ ಸಾಮರ್ಥ್ಯ ಇದೆ ಎಂಬುದಕ್ಕೆ ನಾನೇ ನಿದರ್ಶನ. ರಾಜಕೀಯ ಬಿಟ್ಟರೂ ಸಹಕಾರ ಕ್ಷೇತ್ರವನ್ನು ಬಿಡಲಾರೆ. ಸಹಕಾರ ಕ್ಷೇತ್ರದಿಂದ ಆಯ್ಕೆಯಾಗಿ ರಾಷ್ಟ್ರೀಯ ಮಟ್ಟದ ಇ್ಕೋ ಸಂಸ್ಥೆಯ ಅಧ್ಯಕ್ಷನಾಗಿ ರಾಜ್ಯ ಸರ್ಕಾರದಲ್ಲಿ ಮಂತ್ರಿಯೂ ಆದೆ ಎಂದು ಮಾಜಿ ಸಚಿವ ಹಾಗೂ ಇ್ಕೋ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋಲಾರದ ಟಿ.ಎ.ಪಿ.ಸಿ.ಎಂ.ಸಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಕೃಷಿ ಮಂತ್ರಿಯಾಗಿ, ವಿಶ್ವಮಟ್ಟದ ಇ್ಕೋ ವಿಮಾ ಸಂಸ್ಥೆಯ ಅಧ್ಯಕ್ಷನಾಗಿದ್ದು, ನನಗೆ ಟಿಎಪಿಸಿಎಂಸಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಯಾವುದೇ ಮುಜುಗರವಿಲ್ಲ ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಮಾನವೀಯತೆ ಇದೆ. ಸಂಕಷ್ಟಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಸಹಕಾರ ಕ್ಷೇತ್ರದಲ್ಲಿ ಕಾಣಲು ಸಾಧ್ಯ. ಕಳೆದ 40 ವರ್ಷಗಳಿಂದ ಇ್ಕೋ ಸೇವಾ ಸಂಸ್ಥೆಯಿಂದ ಬಡರೋಗಿಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕೆ ನೂರಾರು ಕೋಟಿ ರೂಪಾಯಿ ಚೆಕ್​ಗಳನ್ನು ಪ್ರತಿ ತಿಂಗಳು ವಿತರಿಸುತ್ತಾ ಮುಂದುವರಿಸಿದ್ದೇನೆ ಎಂದರು.
ಸಾಕಷ್ಟು ಸಹಕಾರ ಸಂಘಗಳು ಮುಳುಗುವ ಹಂತ ತಲುಪಿವೆ.ಈ ಪರಿಸ್ಥಿತಿಗೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಕೋಲಾರ ಡಿ.ಸಿ.ಸಿ. ಬ್ಯಾಂಕ್​ ಉದಾಹರಣೆಯಾಗಿದೆ. ಬ್ಯಾಲಹಳ್ಳಿ ಗೋವಿಂದಗೌಡ ಮುಳುಗುವ ಹಂತದಲ್ಲಿದ್ದ ಡಿ.ಸಿ.ಸಿ. ಬ್ಯಾಂಕ್​ನ್ನು ಯಾರೂ ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಸಿರುವುದು ನಮ್ಮ ಕಣ್ಣ ಮುಂದೆಯೇ ಉದಾಹರಣೆಯಾಗಿದೆ ಎಂದರು. ಪ್ರಾರಂಭದಲ್ಲಿ ಗೋವಿಂದಗೌಡ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ವಿರೋಧಿಸಿದರೂ ಬಳಿಕ ಅವರಿಗೆ ಸಾಕಷ್ಟು ಸಹಕಾರ ನೀಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೋಲಾರಕ್ಕೆ ಭೇಟಿದ ಸಂದರ್ಭದಲ್ಲಿ ನಮ್ಮ ಮನೆಗೆ ಭೇಟಿ ನೀಡಿದ್ದರು. ಇದರಲ್ಲಿ ವಿಶೇಷವೇನೂ ಇಲ್ಲ. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ಕೋರಲಾಗಿತ್ತು. ಕೋಲಾರದಿಂದ ಸ್ಪರ್ಧಿಸಿದ್ದರೆ, ಕೋಲಾರದಿಂದ 2ನೇ ಮುಖ್ಯಮಂತ್ರಿ ಮಾಡುವ ಕನಸು ನನ್ನದ್ದಾಗಿತ್ತು. ಆದರೆ ಅದು ಹುಸಿಯಾಯಿತು. ರಾಜ್ಯದಲ್ಲಿ ನನಗೆ ಯಾವೂದಾದರೂ ಸ್ಥಾನಮಾನ ನೀಡುವುದಾಗಿ ಹಿಂದೆ ತಿಳಿಸಿದ್ದರು ನಿಜ. ಅದರೆ ಅವರು ನೀಡಲಿ, ಬಿಡಲಿ ನಾನು ರಾಜಕೀಯ ಬೇಕಾದರೆ ಬಿಡುತ್ತೇನೆ, ಅದರೆ ಸಹಕಾರ ಕ್ಷೇತ್ರವನ್ನು ಬಿಡಲಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net