

ಯಾದಗಿರಿ: ರಾಜ್ಯ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ವಿಚಾರ ಸದ್ಯ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಮುಖ್ಯಮಂತ್ರಿಗಳ ಸ್ಥಾನ ಯಾರು ಬೇಡ ಅಂತಾರೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದ ನಾಯಕರ ಬಾಯಲ್ಲಿ ಕೇಳಿಬಂದಿವೆ. ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಯಾದಗಿರಿಯಲ್ಲಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ನನಗೂ ಸಿಎಂ ಆಗುವ ಆಸೆ ಇದೆ ಎಂದು ಹೊಸ ಬಾಂಬ್ವೊಂದನ್ನು ಸಿಡಿಸಿದ್ದಾರೆ.
ಇದನ್ನೂ ಓದಿ: ವಚನ ಸಾಹಿತ್ಯಕ್ಕೆ ಸಿದ್ದರಾಮಣ್ಣ ಕೊಡುಗೆ ಅಪಾರ
"ನನಗೂ ಸಿಎಂ ಆಗುವ ಆಸೆ ಇದೆ. ಆದರೆ, ಹೈಕಮಾಂಡ್ ಹೇಳಬೇಕು, ಇಲ್ಲಿ ಕುರ್ಚಿ ಖಾಲಿ ಇರಬೇಕು ಅಂದಾಗ ಇದೆಲ್ಲ ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಕಾಂಗ್ರೆಸ್ನಲ್ಲಿ 136 ಶಾಸಕರಿದ್ದಾರೆ. ಮಂತ್ರಿ, ಮುಖ್ಯಮಂತ್ರಿಯಾಗುವ ಆಸೆ ಎಲ್ಲರಿಗೂ ಇರುತ್ತದೆ. ಇದು ನಿರ್ಧಾರ ಆಗುವುದು ಹೈಕಮಾಂಡ್ನಲ್ಲಿ. ಸದ್ಯಕ್ಕೆ ಮಾತ್ರ ಕುರ್ಚಿ ಖಾಲಿ ಇಲ್ಲ" ಎಂದರು.
"ಸಿದ್ದರಾಮಯ್ಯ ಜನಪರ ಕೆಲಸ ಮಾಡುವ ಮೂಲಕ ಸಿಎಂ ಆಗಿ ಜನಮನ ಗೆದ್ದಿದ್ದಾರೆ. ಇದೆಲ್ಲ ಕೆಲಸವಿಲ್ಲದ ಬಿಜೆಪಿಯವರು ಹುಟ್ಟಿಸುತ್ತಿರುವ ಒಣ ಚರ್ಚೆ. 2022ರಲ್ಲಿ ಮುಡಾದಲ್ಲಿ ಒಂದೇ ದಿನ 848 ನಿವೇಶನ ಹಂಚಲಾಗಿದೆ ಎಂದು ಇಂದಿನ ಪತ್ರಿಕೆಯಲ್ಲಿ ಬಂದಿದೆ. ಆಗ ಅಧಿಕಾರದಲ್ಲಿ ಯಾವ ಪಕ್ಷವಿತ್ತು. ಬಿಜೆಪಿ ತಾನೇ? ಎಂದ ಅವರು, "ಮೊದಲು ಇದಕ್ಕೆ ಉತ್ತರ ಕೊಡಲಿ" ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.