ತಮಾಷೆಗೂ ಮಿತಿ ಇರಬೇಕು; ಬಿಲ್ಲಿಂಗ್ ವಿಚಾರಕ್ಕೆ ಸಹೋದ್ಯೋಗಿಯ ಹತ್ಯೆ

murder (1)
Published on

ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ ಬಿಲ್ ಮಾಡುವ ವಿಚಾರಕ್ಕೆ ನೌಕರರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬಳ್ಳಾರಿ ಮೂಲದ ಕುರುವ ಮಲ್ಲಿಕಾರ್ಜುನ್ (24) ಮೃತ. ಸೆ. 26ರಂದು ಘಟನೆ ನಡೆದಿದ್ದು, ಆರೋಪಿ ರಾಜರತನ್ (25) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕದ ಆರ್‌ಎಂಜೆಡ್ ಗ್ಯಾಲೇರಿಯಾ ಮಾಲ್ 1ನೇ ಮಹಡಿಯಲ್ಲಿ ಬಟ್ಟೆ ಅಂಗಡಿಯಲ್ಲಿ ಮಲ್ಲಿಕಾರ್ಜುನ್ ಮತ್ತು ರಾಜರತನ್ ಸೇರಿ ನೌಕರರು ಕೆಲಸ ಮಾಡುತ್ತಿದ್ದರು.

ಸೆ. 26ರ ಸಂಜೆ 6.30ರಲ್ಲಿ ಕ್ಯಾಷ್ ಕೌಂಟರ್‌ನಲ್ಲಿ ಕಂಪ್ಯೂಟರ್ ಬಿಲ್ ತೆಗೆದು ಗ್ರಾಹಕರಿಗೆ ಕೊಡುವ ವಿಚಾರಕ್ಕೆ ಮಲ್ಲಿಕಾರ್ಜುನ್ ಮತ್ತು ರಾಜರತನ್ ನಡುವೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸಿದ್ದರು. ಇತರ ನೌಕರರು, ಗ್ರಾಹಕರ ಮುಂದೆ ಜಗಳ ಮಾಡಿಕೊಳ್ಳದಂತೆ ಸಲಹೆ ನೀಡಿದ್ದರು. ಅಲ್ಲಿಂದ ಮಲ್ಲಿಕಾರ್ಜುನ್ ಮತ್ತು ರಾಜರತನ್ ತಳ್ಳಾಡಿಕೊಂಡು ಟೇಲರ್ ರೂಮ್‌ಗೆ ಹೋಗಿದ್ದರು.

ಕೋಪೋದ್ರಿಕ್ತ ರಾಜರತನ್, ‘ನಿನ್ನ ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇನೆ’ ಎಂದು ಕತ್ತರಿ ತೆಗೆದುಕೊಂಡು ಮಲ್ಲಿಕಾರ್ಜುನ್ ಎಡಭಾಗದ ಎದೆಯ ಮೇಲೆ ಚುಚ್ಚಿದ್ದ. ಆತನಿಂದ ಬಿಡಿಸಿಕೊಂಡು ಮಲ್ಲಿಕಾರ್ಜುನ್ ಹೊರಗೆ ಬಂದಿದ್ದು, ಸ್ಥಳೀಯರು ಗಾಯಾಳುನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಲಿಸದೆ ಮೃತಪಟ್ಟರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕ್ಯಾಷಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ತನ್ನ ಸಹೋದ್ಯೋಗಿ ರಾಜರತನ್‌ನನ್ನು ಛೇಡಿಸುತ್ತಿದ್ದ ಎನ್ನಲಾಗಿದೆ. ‘ನಿನಗೆ ಕ್ಯಾಷ್ ಸರಿಯಾಗಿ ಎಣಿಸಲು ಬರುವುದಿಲ್ಲ, ಬ್ಯಾಂಕ್‌ಗೆ ಹಣ ಜಮಾ ಮಾಡುವುದಕ್ಕೆ ಬರುವುದಿಲ್ಲ’ ಎಂದು ಹೀಯಾಳಿಸುತ್ತಿದ್ದ. ಇದೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net