91ರ ಇಳಿ ವಯಸ್ಸಲ್ಲೂ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿಗಳು

hd devegowda
Published on

ನವದೆಹಲಿ/ಶ್ರೀನಗರ:  ಎರಡು ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಅವರು, ತಾವು ಪ್ರಧಾನಿಯಾದ 28 ವರ್ಷಗಳ ಬಳಿಕ ದೇಶದ ಕೊನೆಯ ಭಾಗದಲ್ಲಿರುವ ಕಾಶ್ಮೀರದ ಶಂಕರಾಚಾರ್ಯರ ಬೆಟ್ಟದಲ್ಲಿರುವ ಜ್ಯೇಷ್ಟೇಶ್ವರ ಶಿವನ ದೇವಸ್ಥಾನವೆಂದೂ ಕರೆಯಲ್ಪಡುವ ಶಂಕರಾಚಾರ್ಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

ಇಂದು ಬೆಳಗ್ಗೆ (ಆಗಸ್ಟ್ 30) ಕಾಶ್ಮೀರದ ಶಂಕರಾಚಾರ್ಯರ ಬೆಟ್ಟದ ಮೇಲಿರುವ ಜ್ಯಷ್ಟೇಶ್ವರ ಶಿವನ ದೇವಸ್ಥಾನವೆಂದೂ ಕರೆಯಲ್ಪಡುವ ಶಂಕರಾಚಾರ್ಯ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಇನ್ನೂ ಈ ಕುರಿತು ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂಬುದು ನನ್ನ ಜೀವಮಾನದ ಕನಸಾಗಿತ್ತು ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿಗಳು. ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು.

ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ ಎಂದು ಮಾಜಿ ಪ್ರಧಾನಿಗಳು ಹೇಳಿದ ಅವರು, ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದರು. ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಮಾಜಿ ಪ್ರಧಾನಿಗಳು ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಇಲ್ಲಿಗೆ ಭೇಟಿ ನೀಡಿ ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು.

ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ಅವರು, ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಮಾಜಿ ಪ್ರಧಾನಿಗಳು ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲಾಗಲಿಲ್ಲ. ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ಬರುವೆ ಮಾಜಿ ಪ್ರಧಾನಿ ದೇವೇಗೌಡ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net