

ನವದೆಹಲಿ: ಎಲೆಕ್ಟ್ರಿಕ್ ವೆಹಿಕಲ್ ಬಳಕೆ, ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆ ಮತ್ತು ಇವಿ ತಂತ್ರಜ್ಞಾನ-ನಾವೀನ್ಯತೆ ಈ ಮೂರು ವಿಷಯಗಳಲ್ಲಿ ಮಾಡಿರುವ ಸಾಧನೆಗಾಗಿ ನೀತಿ ಆಯೋಗದ ಮೊದಲ ‘ಇಂಡಿಯಾ ಎಲೆಕ್ಟ್ರಿಕ್ ಮೊಬಿಲಿಟಿ ಸೂಚಿ’ಯಲ್ಲಿ (ಐಇಎಂಐ) ದೆಹಲಿ, ಮಹಾರಾಷ್ಟ್ರ ಮತ್ತು ಚಂಡೀಗಢ ಮುಂಚೂಣಿಯಲ್ಲಿವೆ.
ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು 16 ಅಂಶಗಳ ಆಧಾರದ ಮೇಲೆ ಆಯೋಗ ಮೌಲ್ಯಮಾಪನ ಮಾಡಿದೆ. ವಾಹನ ವಿದ್ಯುದೀಕರಣದಲ್ಲಿ ದೆಹಲಿ, ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ಹರಿಯಾಣ, ಕರ್ನಾಟಕ, ಲಡಾಖ್, ಹಿಮಾಚಲ ಪ್ರದೇಶ ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆಯಲ್ಲಿ ಮುಂಚೂಣಿಯಲ್ಲಿವೆ.
ಸಂಶೋಧನೆ- ನಾವೀನ್ಯತೆಯಲ್ಲಿ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಹರಿಯಾಣ ಮತ್ತು ತೆಲಂಗಾಣ ಗಮನಾರ್ಹ ಸಾಧನೆ ಮಾಡಿವೆ ಎಂದು ಆಯೋಗ ತಿಳಿಸಿದೆ. 2024ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನ ಮತ್ತು ಕಾರುಗಳ ಬಳಕೆ ಶೇ. 5.3ರಷ್ಟು ಏರಿಕೆಯಾಗಿದ್ದು, 12 ಲಕ್ಷಕ್ಕೂ ಹೆಚ್ಚು ಇವಿಗಳು ನೋಂದಣಿಯಾಗಿವೆ. ದೇಶದಲ್ಲಿ 25,000ಕ್ಕೂ ಹೆಚ್ಚು ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳಿವೆ.
ದೇಶದ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರಕ್ಕೆ ವೇಗ ನೀಡಲು ಸ್ಪಷ್ಟ ಗುರಿ ಮತ್ತು ಕಾಲಮಿತಿಯೊಂದಿಗೆ ರಾಷ್ಟ್ರೀಯ ಇವಿ ನೀತಿ ರೂಪಿಸಬೇಕೆಂದು ನೀತಿ ಆಯೋಗವು ಕೇಂದ್ರ ಸರ್ಕಾರಕ್ಕೆ ಸೋಮವಾರ ಒತ್ತಾಯಿಸಿದೆ.