

ಲಂಡನ್: ಚೀನಾ ಬಳಿಕ ಕರೊನಾದ ಹಾಟ್ಸ್ಪಾಟ್ ಆಗಿದ್ದು, ಯುರೋಪಿಯನ್ ದೇಶಗಳು. ಕೆಲವೇ ದಿನಗಳಲ್ಲಿ ಚೀನಾವನ್ನು ಮೀರಿಸಿದ ಮಟ್ಟದಲ್ಲಿ ಇಟಲಿಯನ್ನು ಕರೊನಾ ಆವರಿಸಿತು. ನಂತರ ಸ್ಪೇನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ಆಸ್ಟ್ರಿಯಾಗಳನ್ನು ಆವರಿಸಿತು. ಬಹುತೇಕ ಯುರೋಪ್ನ ಎಲ್ಲ ರಾಷ್ಟ್ರಗಳಲ್ಲಿ ಚೀನಾಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕರೊನಾದಿಂದಾಗಿ ಸಾವು ಸಂಭವಿಸಿದವು. ಲಕ್ಷಾಂತರ ಜನರಿಗೆ ಸೋಂಕು ವ್ಯಾಪಿಸಿತು.
ಪ್ರಸ್ತುತ ಭಾರತದಲ್ಲಿ ಲಾಕ್ಡೌನ್ ಮೇ 3ರವರೆಗೆ ಮುಂದುವರಿದಿದೆ. ಆದರೆ, ಯುರೋಪಿಯನ್ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ ಗೊತ್ತೆ?
ಯುರೋಪ್ನ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ "ಔಟ್" ಆಗಿದೆ. ಹೌದು ಅಲ್ಲೀಗ ಜನ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪೇನ್, ಇಟಲಿ, ಆಸ್ಟ್ರಿಯಾಗಳು ಕರೊನಾ ನಿರ್ಬಂಧಗಳನ್ನು ತೆರವುಗೊಳಿಸುವಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆ.
ಕಳೆದ 25 ದಿನಗಳ ಅವಧಿಯಲ್ಲಿ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ ಇಲ್ಲಿ ಗಣನಿಯವಾಗಿ ಇಳಿಮುಖವಾಗಿದೆ. ಸಾವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಜತೆಗೆ ಕುಸಿದಿರುವ ಆರ್ಥಿಕ ವ್ಯವಸ್ಥೆಯನ್ನು ಹಳಿಗೆ ತರಬೇಕಿದೆ. ಈ ಎಲ್ಲ ಕಾರಣದಿಂದಾಗಿ ಇಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.
ಯುರೋಪಿನ ರಾಷ್ಟ್ರಗಳಲ್ಲಿ ವ್ಯಾಪಾರ-ವಹಿವಾಟು ಆರಂಭಕ್ಕೆ ಅನುಮತಿ ನೀಡಲಾಗಿದೆ. ಸ್ಪೇನ್ನಲ್ಲಿ ಅತ್ಯಾವಶ್ಯಕವಲ್ಲದ ಸೇವೆಗಳನ್ನು ಅಥವಾ ಉದ್ಯೋಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದೆ. ಅಲ್ಲಿನ ಜನಜೀವನ ಸಹಜವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಾರ್ಖಾನೆಗಳನ್ನು ಆರಂಭಿಸಲು ಅಲ್ಲಿನ ಸರ್ಕಾರ ಅನುಮತಿಸಿದೆ. ಜತೆಗೆ ಮೆಟ್ರೋ ರೈಲುಗಳ ಸಂಚಾರ ಶುರುವಾಗಿದೆ.
ಜರ್ಮನಿಯಲ್ಲಿ ಶಾಲಾ- ಕಾಲೇಜುಗಳನ್ನು ಸೋಮವಾರದಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ. ಇಟಲಿಯಲ್ಲೂ ಶೈಕ್ಷಣಿಕ ಚಟುವಟಿಕೆಗಳು ಚಾಲನೆ ಪಡೆದಿವೆ. ಅಲ್ಲೀಗ ಶಾಲೆ ಹಾಗೂ ಡೇ ಕೇರ್ಗಳು ಆರಂಭವಾಗಿವೆ.
ಆದರೆ, ಫ್ರಾನ್ಸ್ನಲ್ಲಿ ಮೇ 11ರವರೆಗೆ ಲಾಕ್ಡೌನ್ ಮುಂದುವರಿಯಲಿದೆ ಎಂದು ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್ ಘೋಷಣೆ ಮಾಡಿದ್ದಾರೆ.
ವಿದೇಶ