ಎತ್ತಿನಹೊಳೆಗೆ 508 ಎಕರೆ ಅರಣ್ಯ ಭೂಮಿ ನೀಡಲು ಶೀಘ್ರವೇ ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಈಶ್ವರ ಖಂಡ್ರೆ

ESHWAR KANDRE congress
Published on

ಬೆಂಗಳೂರು:
ಎತ್ತಿನಹೊಳೆಗೆ ಅರಣ್ಯ ವ್ಯಾಪ್ತಿಯ 508 ಎಕರೆ ಬೇಕಾಗಲಿದೆ ಎನ್ನುವ ಚರ್ಚೆ ನಡೆದಿದ್ದು, ಈ ಬಗ್ಗೆ ಪ್ರಸ್ತಾವನೆ ಬಂದ ಕೂಡಲೇ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಬಗ್ಗೆ ಮುಖ್ಯಮಮತ್ರಿಗಳ ಅಧ್ಯಕ್ಷತೆಯಲ್ಲಿ ಚರ್ಚೆ ನಡೆದಿದೆ. ಆದರೆ, ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ನಮಗೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿಲ್ಲ ಎಂದು ಹೇಳಿದರು.
ಅರಣ್ಯ ವ್ಯಾಪ್ತಿಯ 508 ಎಕರೆ ಬಿಟ್ಟುಕೊಡಬೇಕಾದರೆ, ಅದಕ್ಕೆ ಪರ‌್ಯಾಯವಾಗಿ ಅಷ್ಟೇ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕು. ಒಂದು ಮರ ತೆಗೆದರೆ ಅಲ್ಲಿ 10 ಸಸಿಗಳನ್ನು ನೆಡುವ ಮೂಲಕ ಪರಿಸರ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಶೀಘ್ರವೇ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲು ಇಲಾಖೆ ಸಿದ್ಧವಾಗಿದೆ ಎಂದರು.
ಗೋವಾ ತಮ್ನಾಳ್ ವಿದ್ಯುತ್ ಲೈನ್ ಎಳೆಯಲು ಮೊದಲು 1 ಲಕ್ಷ ಮರಗಳನ್ನು ತೆಗೆಯಬೇಗುತ್ತದೆ ಎಂದು ಪ್ರಸ್ತಾವನೆ ಬಂದಿತ್ತು. ಆದ್ದರಿಂದ ಅದನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿತ್ತು. ಮತ್ತು ಆ ಯೋಜನೆಯನ್ನು ಮರು ಪರಿಗಣಿಸಿ 30 ಸಾವಿರ ಮರಗಳ ಹಾನಿಗೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ನೀಡಿದರೆ, ನಾವು ವಿದ್ಯುತ್ ಲೈನ್ ಎಳೆಯುವುದಕ್ಕೆ ಅನುಮತಿಸುತ್ತೇವೆ ಎಂದರು.
ಶರಾವತಿ ಸಂತ್ರಸ್ತರ ಬಗ್ಗೆ ಇಂಧನ ಇಲಾಖೆ, ಜಲಸಂಪನ್ಮೂಲ ಇಲಾಖೆ ಜೊತೆಗೆ ಸಭೆ ನಡೆಸಲಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net