

ಬೆಂಗಳೂರು: ಸಂಸತ್ತಿನ ಅಂದಾಜು ಸಮಿತಿ ಅಮೃತ ಮಹೋತ್ಸವ (75 ವರ್ಷಗಳು) ವರ್ಷದ ನಿಮಿತ್ತ ಮೊದಲ ಬಾರಿಗೆ ಸಂಸತ್ತು ಸೇರಿ ದೇಶದ ಎಲ್ಲ ರಾಜ್ಯಗಳ ವಿಧಾನಸಭೆ ಅಂದಾಜು ಸಮಿತಿಗಳ ಸಮಾವೇಶ ನಿಗದಿಯಾಗಿದೆ ಎಂದು ವಿಧಾನಸಭೆ ಅಂದಾಜು ಸಮಿತಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ತಿಳಿಸಿದರು.
ಮುಂಬೈನ ವಿಧಾನಸಭೆಯಲ್ಲಿ ಅಂದಾಜುಗಳ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಸಮ್ಮೇಳನವು ಇದೇ 23 ಮತ್ತು 24ರಂದು ನಡೆಯಲಿದೆ. ಪ್ರತಿ ರಾಜ್ಯದಿಂದ ಅಧ್ಯಕ್ಷ ಜತೆಗೆ ನಾಲ್ಕು ಸದಸ್ಯರಿಗೆ ಆಹ್ವಾನ ನೀಡಲಾಗಿದೆ.
ಸಂಸತ್ತಿನ ಅಂದಾಜು ಸಮಿತಿ ಕಳೆದ 75 ವರ್ಷಗಳಲ್ಲಿ ನಡೆದು ಬಂದ ದಾರಿಯ ಅವಲೋಕನವಾಗಲಿದೆ. ಅದೇ ರೀತಿ ಎಲ್ಲ ರಾಜ್ಯಗಳ ವಿಧಾನಸಭೆ ಅಂದಾಜು ಸಮಿತಿಗಳ ಕಾರ್ಯಶೈಲಿ ಚರ್ಚೆಯಾಗಲಿದೆ.
ಇದೇ ಮೊದಲ ಬಾರಿಗೆ ಸಮಾವೇಶವು ಸ್ಪಷ್ಟ ಮುನ್ನೋಟವೊಂದು ಕಟ್ಟಿಕೊಡುವ ನಿರೀಕ್ಷೆಯಿದೆ. ಬೇರೆ ರಾಜ್ಯಗಳ ವಿಧಾನಸಭೆ ಅಂದಾಜು ಸಮಿತಿಗಳ ಕೆಲಸ, ಕಾರ್ಯಗಳ ಮಾಹಿತಿ ಲಭಿಸಲಿದೆ ಎಂದು ಹೇಳಿದರು.
ಪೂರ್ವನಿಗದಿತ 23ರ ರಾಯಚೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕಾಗಿದೆ. ಹೀಗಾಗಿ ಮೊದಲ ದಿನ ನಾಲ್ವರ ಸದಸ್ಯರು ಭಾಗವಹಿಸುವರು. ಎರಡನೇ ದಿನ 24ರಂದು ಸದಸ್ಯರ ಜತೆಗೆ ನಾನು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವೆ ಎಂದು ಹಂಪನಗೌಡ ಬಾದರ್ಲಿ ಮಾಹಿತಿ ನೀಡಿದರು.