ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದ ನಟಿ ಈಗ ನಿರ್ದೇಶಕಿ!

Untitled design (21)
Published on

ಬೆಂಗಳೂರು: ಗ್ಲಾಮರ್ ಪಾತ್ರಗಳ ಮೂಲಕ ಫೇಮಸ್ ಆಗಿರುವ ಎಸ್ತರ್ ನರೋನ್ಹಾ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದು, 'ನಾವಿಕ', 'ಅತಿರಥ', 'ನುಗ್ಗೇಕಾಯಿ', 'ಲೋಕಲ್ ಟ್ರೈನ್', 'ಇನಾಮ್ದಾರ್' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಈ ಬ್ಯೂಟಿ ಇದೀಗ 'ದಿ ವೆಕೆಂಟ್ ಹೌಸ್' ಸಿನಿಮಾ ಮೂಲಕ ಡೈರೆಕ್ಟರ್ ಆಗಿ ಕ್ಯಾಪ್ ತೊಟ್ಟಿರುವುದು ಗಮನಾರ್ಹ.

ನಿರ್ದೇಶನದ ಜತೆ ಜತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆ ಜವಾಬ್ದಾರಿಯನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ನರೋನ್ಹಾ ಅವರ ಬಹುದಿನದ ಕನಸು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ ಎಸ್​ಆರ್​ವಿ ಥಿಯೇಟರ್​ನಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ ನಟಿ ಎಸ್ತಾರ್ ನರೋನ್ಹಾ, "ದಿ ವೆಕೆಂಟ್ ಹೌಸ್ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಇದು ಹಾರರ್ ಸಿನಿಮಾವಲ್ಲ. ಇದೊಂದು ಖಾಲಿ ಮನೆ ಸುತ್ತ ಸಾಗುವ ಕಥೆ. ಈಗಿನ ಯೂತ್​ಗೆ ಬಹಳ ಕನೆಕ್ಟ್ ಆಗುವ ಚಿತ್ರವಿದು. ಪ್ರೀತಿ ಮತ್ತು ಎಮೋಷನ್ ಎರಡನ್ನು ಸೇರಿ ಎಣೆದ ಕಥೆ. ಡೈರೆಕ್ಷನ್ ಮಾಡಿದ್ದು ತುಂಬ ಖಷಿಯಿದೆ" ಎಂದರು.

"ನನ್ನ ವಿಷನ್​ ಅನ್ನು ಓಪನ್ ಆಗಿ ಹೇಳುವ ಸ್ವಾತಂತ್ರ ನನ್ನ ಸಿನಿಮಾದಲ್ಲಿ ಸಿಕ್ಕಿದೆ. ನಾನು ಎಂಟು ವರ್ಷದಿಂದ ಸಿಂಗರ್. ನಾನು ರಂಗಭೂಮಿಗೆ ಬಂದಿದ್ದು ಕೂಡ ಸಿಂಗರ್ ಆಗಿಯೇ. ಹೀಗಾಗಿ ಈ ಚಿತ್ರದಲ್ಲಿ ನಾನೇ ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದೇನೆ. ಇದು ನೈಜ ಘಟನೆಯಾಧಾರಿತ ಚಿತ್ರವಲ್ಲ. ಸಿನಿಮಾ 1 ಗಂಟೆ 40 ನಿಮಿಷವಿದೆ. ಎಲ್ಲಿಯೂ ಬೋರಿಂಗ್ ಹೊಡೆಸಲ್ಲ. ಚಿತ್ರದ ಮೇಲೆ ನಿಮ್ಮ ಬೆಂಬಲವಿರಲಿ" ಎಂದರು.

'ದಿ ವೆಕೆಂಟ್ ಹೌಸ್' ಸಿನಿಮಾದ ಹಾಡುಗಳು, ಟೀಸರ್ ಗಮನ ಸೆಳೆಯುತ್ತಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣವಿದೆ. ವಿಜಯ್ ರಾಜ್ ಸಂಕಲನ ಕೆಲಸಗಳನ್ನು ನಿಭಾಯಿಸಿದ್ದಾರೆ. 'ದಿ ವೆಕೆಂಟ್ ಹೌಸ್' ಸಿನಿಮಾದ ಬಹುತೇಕ ಭಾಗಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರ ಇದೇ ನವೆಂಬರ್​ 17 ರಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net