ಕೈಗಾರಿಕೆಗಳ ಸ್ಥಾಪನೆ ಹಾಲಿ-ಮಾಜಿಗಳಿಗೆ ಪ್ರತಿಷ್ಠೆ

yadaruru kidb
ಯದರೂರು ಸಮೀಪ ಕೈಗಾರಿಕೆಗಳಿಗೆ ಮೀಸಲಿರಿಸಿರುವ ಜಾಗ.
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ.

ಕ್ಷೇತ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಸರ್ಕಾರವು 2024ರಲ್ಲಿಯೇ 1,273 ಎಕರೆ ಜಮೀನನ್ನು ಗುರುತಿಸಿ ಕೆಐಎಡಿಬಿಯಿಂದ ಭೂ ಸ್ವಾಧಿನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಒಟ್ಟು 500 ಖಾತೆದಾರರ ಪೈಕಿ ಶೇ.70 ರೈತರಿಂದ ಆಕ್ಷೇಪಣೆ ಸಂಗ್ರಹಿಸಲಾಗಿದೆ. ಬಾಕಿ ಕೆಲಸ ಮುಗಿಸಲು ಅಧಿಕಾರಿಗಳು ಸಿದ್ಧರಿದ್ದಾರೆ. ಆದರೆ, ಈಗ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರಿಬ್ಬರಿಗೂ ಈ ವಿಚಾರ ಪ್ರತಿಷ್ಠೆಯಾಗಿದೆ.

ಕೆಐಎಡಿಬಿ ಜಾಗ ಗುರುತಿಸಿದ್ದರಿಂದ ವರ್ಷದಿಂದ ರೈತರು ಜಮೀನುಗಳಲ್ಲಿ ಯಾವುದೇ ಚಟುವಟಿಕೆ ಮಾಡುತ್ತಿಲ್ಲ, ರೈತರೊಂದಿಗೂ ಈಗಾಗಲೇ ಎರಡು ಸಭೆ ನಡೆಸಿದ ಭೂಸ್ವಾಧಿನಾಧಿಕಾರಿಗಳು ಆಕ್ಷೇಪಣೆ ಸ್ವೀಕರಿಸಿದ್ದಾರೆ. ಮೊದಲು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ರೈತರನ್ನು ಮನವೊಲಿಸುವ ಪ್ರಯತ್ನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದಾರೆ. ಇದರಿಂದಾಗಿ ಶತಾಯಗತಾಯ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಿಯೇ ತೀರಬೇಕು ಎಂದು ಪಣ ತೊಟ್ಟಿದ್ದಾರೆ.

ಮತ್ತೊಂದೆಡೆ ಕೈಗಾರಿಕೆಗಳು ಬೇಡ ಅಂದುಕೊಂಡಿರುವ ರೈತರು ಮಾಜಿ ಸ್ಪೀಕರ್​ ಕೆ.ಆರ್​.ರಮೇಶ್​ ಕುಮಾರ್​ ಅವರನ್ನು ಭೇಟಿ ಮಾಡಿ, ಭೂಮಿ ಕಳೆದುಕೊಳ್ಳುವ ಭೀತಿ ತೋಡಿಕೊಂಡ ಮೇರೆಗೆ ಈ ವಿಚಾರದಲ್ಲಿ ರಮೇಶ್​ಕುಮಾರ್​ ಅವರು ಮಧ್ಯಪ್ರವೇಶ ಮಾಡಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಸರ್ಕಾರ ಯಾರ ಪ್ರಯತ್ನಕ್ಕೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

* ಅಂದು ಬೇಕೆಂದವರಿಗೆ ಈಗೇಕೆ ಬೇಡ?

ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್​ ಆಡಳಿತದಲ್ಲಿದ್ದಾಗ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದು ಮೊದಲ ಹಂತದಲ್ಲಿ ರೈಲ್ವೆ ಕೋಚ್​ ಫ್ಯಾಕ್ಟರಿ ಶಂಕುಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವರಾಗಿದ್ದ ಕೆ.ಎಚ್​.ಮುನಿಯಪ್ಪ, ಸಚಿವರಾಗಿದ್ದ ಯು.ಟಿ. ಖಾದರ್​, ರಮೇಶ್​ ಕುಮಾರ್​, ಕೃಷ್ಣಬೈರೇಗೌಡ ಹಾಗೂ ಶಾಸಕರು ಕಾರ್ಯಕ್ರಮಕ್ಕೆ ಸಾಯಾಗಿದ್ದರು. ಜತೆಗೆ ಇಲ್ಲಿ ರೈಲ್ವೆ ಕೋಚ್​ ್ಯಾಕ್ಟರಿ ಆಗಬೇಕು ಎಂಬುದು ರಮೇಶ್​ ಕುಮಾರ್​ ಒತ್ತಾಸೆಯಾಗಿತ್ತು. ಆನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಯೋಜನೆ ಕಡೆಗಣಿಸಿದವು. ಆದರೆ, ಈ ಮೊದಲು ಕೈಗಾರಿಕೆಗಳು ಆಗಬೇಕು ಎನ್ನುತ್ತಿದ್ದ ರಮೇಶ್​ ಕುಮಾರ್​ ಈಗೇಕೆ ಬೇಡ ಎನ್ನುತ್ತಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

*ಫ್ಯಾಕ್ಟರಿಯೂ ಇಲ್ಲ, ವರ್ಕ್​ ಶಾಪೂ ಇಲ್ಲ!

ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಬಜೆಟ್​ನಲ್ಲಿ ರೈಲ್ವೆ ಕೋಚ್ ​ಫ್ಯಾಕ್ಟರಿ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಇದಕ್ಕೆ ತಕ್ಕಂತೆ ಜಾಗ ಗುರುತಿಸಿ ಶಂಕುಸ್ಥಾಪನೆ ನೆರವೇರಿಸಲಾಯಿತು. 2020&21ನೇ ಸಾಲಿನ ಬಜೆಟ್​ನಲ್ಲಿ ಕೋಚ್​ ್ಯಾಕ್ಟರಿ ಬದಲು, 400 ಎಕರೆ ಜಾಗದಲ್ಲಿ 495 ಕೋಟಿ ವೆಚ್ಚದಲ್ಲಿ ರೈಲ್ವೆ ವರ್ಕ್​ಶಾಪ್​ ಸ್ಥಾಪಿಸಲು ಘೋಷಣೆ ಮಾಡಲಾಯಿತು. ಆದರೆ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಫ್ಯಾಕ್ಟರಿಯೂ ಹೋಯಿತು, ವರ್ಕ್​ ಶಾಪೂ ಹೋಯಿತು!. ಫ್ಯಾಕ್ಟರಿ ಬದಲು ವರ್ಕ್​ಶಾಪ್​ ಹೆಸರು ಇಟ್ಟ ಆಗಿನ ಸಂಸದ ಎಸ್​.ಮುನಿಸ್ವಾಮಿ ಅವರು ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಯನ್ನು ಸಲಗೊಳಿಸುವಲ್ಲಿ ವಿಲರಾದರು.

* ಪ್ರತಿಷ್ಠೆಯಾಗಿದ್ದು ಏಕೆ...?

ಜಿ.ಕೆ.ವೆಂಕಟಶಿವಾರೆಡ್ಡಿ ನೃತೃತ್ವದ ಸಭೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಕ್ಷೇತ್ರದ ಅಭಿವೃದ್ಧಿ ಜತೆಗೆ, ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಮಾವು, ಟೊಮ್ಯಾಟೊ ಸಂಸ್ಕರಣಾ ಟಕ ಸ್ಥಾಪನೆಗೆ ಅವಕಾಶವಾಗುತ್ತದೆ ಎಂದು ರೈತರ ಮನವೊಲಿಸಿದರು. ಇದಕ್ಕೆ ಕಾಂಗ್ರೆಸ್​ ಹಾಗೂ ಸಿಪಿಎಂ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಸ್ವಾಧಿನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಅವರ ಪ್ರಯತ್ನ ವಿಲವಾದ ಹಿನ್ನಲೆಯಲ್ಲಿ ರೈತರು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮೊರೆ ಹೋದರು. ರೈತರಪರ ಬಂದ ರಮೇಶ್​ಕುಮಾರ್​ಅವರು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುವವರ ಭೂಮಿ ತೆಗೆದುಕೊಳ್ಳಿ, ಕೊಡದವರ ಭೂಮಿ ಕಿತ್ತುಕೊಳ್ಳಲು ಮುಂದಾದರೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

* ಹೆಸರು ತಪ್ಪಿಸಲು ಯತ್ನ

ಆಂಧ್ರ ಗಡಿಯಲ್ಲಿರುವ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಅವಕಾಶವಿದೆ. ಇದಕ್ಕೆ ಕೆಐಎಡಿಬಿ ವತಿಯಿಂದ ಕ್ರಮಕೈಗೊಂಡು ಯದರೂರು ಬಳಿ ಗುರುತಿಸಿರುವ ಜಾಗವನ್ನು ಅಂತಿಮಗೊಳಿಸಲು ಸದನದಲ್ಲಿ ವೆಂಕಟಶಿವಾರೆಡ್ಡಿ ಅವರು ಧ್ವನಿ ಎತ್ತಿದ್ದರು. ಈಗ ಸ್ಥಾಪನೆಯಾದರೆ ಹಾಲಿ ಶಾಸಕರಿಗೆ ಹೆಸರು ಬರುತ್ತದೆ, ಅದನ್ನು ತಪ್ಪಿಸಲು ಆಡಳಿತ ಪಕ್ಷದ ಕಾಂಗ್ರೆಸ್​ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net