

ನಂಜನಗೂಡು: ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುತ್ತೂರಿನಲ್ಲಿ ಬಾಸ್ಕೆಟ್‌ಬಾಲ್ ಅಕಾಡೆಮಿ ಸ್ಥಾಪಿಸಿ, ರಾಷ್ಟ್ರ ಮಟ್ಟದ ತರಬೇತುದಾರರಿಂದ ಕ್ರೀಡಾಸಕ್ತರಿಗೆ ತರಬೇತಿ ಕೊಡಿಸಲಾಗುವುದು ಎಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮತ್ತು ಫಿಭಾ ಏಷ್ಯಾ ಭಾರತ ಬಾಸ್ಕೆಟ್ ಬಾಲ್ ಒಕ್ಕೂಟದ ಅಧ್ಯಕ್ಷ ಕೆ.ಗೋವಿಂದರಾಜು ತಿಳಿಸಿದರು.
ತಾಲೂಕಿನ ಸುತ್ತೂರಿನಲ್ಲಿ ಭಾನುವಾರ ನಡೆದ ಜೆಎಸ್‌ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುತ್ತೂರು ಮಹಾವಿದ್ಯಾಪೀಠದಲ್ಲಿ ವ್ಯಾಸಂಗ ಮಾಡುವ ಅವಕಾಶ ಪಡೆದಿರುವ ವಿದ್ಯಾರ್ಥಿಗಳು ಪುಣ್ಯವಂತರು, ಇಲ್ಲಿ ಗುರುಕುಲದ ಪದ್ಧತಿಯಂತೆ ಶಿಕ್ಷಣ ನೀಡುತ್ತಿದ್ದು, ಇಲ್ಲಿ ವ್ಯಾಸಂಗ ಮಾಡಿದ ಶೇ.90 ರಷ್ಟು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿವರ್ಷ ಸುತ್ತೂರು ಜೆ.ಎಸ್.ಎಸ್. ಅಂತರ ಸಂಸ್ಥೆಗಳ ಕ್ರೀಡಾಕೂಟದಲ್ಲಿ ಉತ್ತಮ ಮಹಿಳಾ ಹಾಗೂ ಪುರುಷ ಕ್ರೀಡಾಪಟುವಿಗೆ ತಲಾ 50 ಸಾವಿರ ರೂ.ನಗದು ಪುರಸ್ಕಾರ ನೀಡುತ್ತೇನೆ, ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀಗಳು ಒಳಾಂಗಣ ಕ್ರೀಡಾಂಗಣಗಳ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಅವಕಾಶ ನೀಡಿದ್ದು, 187 ಪೊಲೀಸ್ ಕಾನ್‌ಸ್ಟೆಬಲ್‌ಗಳು ಹಾಗೂ 18 ಪಿಎಸ್‌ಐಗಳಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕ್ರೀಡಾಪಟುಗಳಿಗೆ ಶೇ.3ರಷ್ಟು ಉದ್ಯೋಗ ಮೀಸಲಾತಿ ನೀಡಲು ತೀರ್ಮಾನಿಸಿದೆ ಎಂದು ಹೇಳಿದರು.
ಧ್ವಜ ವಂದನೆ ಸ್ವೀಕರಿಸಿ, ಕ್ರೀಡಾಕೂಟವನ್ನು ಉದ್ಘಾಟಿಸಿದ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಮಾತನಾಡಿ, ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಥಾನ ಗಳಿಸಿ ಪುರಸ್ಕೃತರಾದ ಕ್ರೀಡಾಪಟುಗಳಿಗೆ ಸರ್ಕಾರ ಉನ್ನತ ಹುದ್ದೆ ನೀಡಿ ಗೌರವಿಸುತ್ತಿದೆ. ವಿದ್ಯಾರ್ಥಿಗಳಿಗೆ ಓದಿನಷ್ಟೇ ಕ್ರೀಡೆಯೂ ಮುಖ್ಯವಾಗಿದೆ. ದೇಶದಲ್ಲಿ ಗ್ರಾಮೀಣ ಕ್ರೀಡೆಯಾಗಿ ಉಳಿದಿದ್ದ ಕಬಡ್ಡಿ, ಪ್ರೋ ಕಬಡ್ಡಿ ಬಂದ ನಂತರ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಗ್ರಾಮೀಣ ಭಾಗದ ಮಕ್ಕಳು ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಜೆಎಸ್‌ಎಸ್ ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು.