ಎಸ್ಸೆಸ್ಸೆಲ್ಸಿಯಲ್ಲಿ ರಾಣೆಬೆನ್ನೂರಿಗೆ ಶೇ. 80.78ರಷ್ಟು ಫಲಿತಾಂಶ

9-RNR-10
Published on

ರಾಣೆಬೆನ್ನೂರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವಾಗಿದ್ದು, ತಾಲೂಕಿನ ಒಟ್ಟಾರೆ ಫಲಿತಾಂಶ ಶೇ.80.78ರಷ್ಟಾಗಿದ್ದು, ಜಿಲ್ಲೆಗೆ 3ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ 4ನೇ ಸ್ಥಾನ ಪಡೆದಿದ್ದ ತಾಲೂಕು ಈ ಬಾರಿ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದೆ.
ಈ ವರ್ಷವೂ ಬಾಲಕಿಯರು ಮೇಲುಗೈ ಸಾಧಿಸಿದ್ದು ಪರೀಕ್ಷೆಗೆ ಕುಳಿತ ಒಟ್ಟು 4637 ವಿದ್ಯಾರ್ಥಿಗಳಲ್ಲಿ 1723 ಬಾಲಕರು ಮತ್ತು 2022 ಬಾಲಕಿಯರು ಸೇರಿ ಒಟ್ಟು 3745 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ನಗರದ ಆಕ್ಸ್‌ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕಿಶನ್ ನಸವಾಳಕರ ಶೇ.98.08 ಅಂಕಗಳಿಸಿ ತಾಲೂಕಿಗೆ ಪ್ರಥಮ, ತಾಲೂಕಿನ ಮಾಕನೂರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಬಸವರಾಜ ಕೋಲಕಾರ ಶೇ. 97.76ರಷ್ಟು ಅಂಕಗಳಿಸಿ ದ್ವಿತೀಯ ಹಾಗೂ ನಗರದ ಏಜು ಏಷಿಯಾ ವಲ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಚರಣ ಎನ್.ಬಿ. ಮತ್ತು ತಾಲೂಕಿನ ಮಾಕನೂರ ಗ್ರಾಮದ ಮೂರಾರ್ಜಿ ದೇಸಾಯಿ ಅಂಗ್ಲ ಮಾಧ್ಯಮ ವಸತಿ ಶಾಲೆಯ ಚರಣ ಎಂ.ಬಿ. ಶೇ.97.60ರಷ್ಟು ಅಂಕಗಳಿಸಿ ತೃತಿಯ ಸ್ಥಾನ ಗಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 85 ಪ್ರೌಢಶಾಲೆಗಳಿದ್ದು ಕಮದೋಡದ ಡಾ. ಬಿ.ಆರ್. ಅಂಬೇಡ್ಕರ್ ಪ್ರೌಢಶಾಲೆ, ಮಾಕನೂರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆ, ಹಿರೇಬಿದರಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಸುಣಕಲ್ಲಬಿದರಿ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಅಲ್ಪಸಂಖ್ಯಾತ ಮೂರಾರ್ಜಿ ದೇಸಾಯಿ ವಸತಿ ಶಾಲೆ, ಕವಲೆತ್ತು ಗ್ರಾಮದ ಗ್ರಾಸಿಂನ ಸಿರಿಗಂಧ ಪ್ರೌಢಶಾಲೆ, ನಗರದ ರೇಣುಕಾ ಯಲ್ಲಮ್ಮ ಕಿವುಡ, ಮೂಕ ಮಕ್ಕಳ ವಸತಿ ಶಾಲೆ, ಆಲ್ ಇಲಾಲಾ ಪ್ರೌಢಶಾಲೆ, ಶಿವಗಂಗಾ ಪ್ರೌಢಶಾಲೆ, ತಾಲೂಕಿನ ಚಳಗೇರಿ ಗ್ರಾಮದ ಕೆನರಾ ವಿಷನ್ ಪ್ರೌಢಶಾಲೆ ಶೇ. 100ರಷ್ಟು ಫಲಿತಾಂಶದ ಸಾಧನೆ ಮಾಡಿವೆ ಎಂದು ಬಿಇಒ ಎಂ.ಎಚ್. ಪಾಟೀಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net