

ಅಲ್ಲಮನು ಇಷ್ಟಲಿಂಗದ ನೆಲೆಯನ್ನು ಬಸವಣ್ಣನೇ ಆದಿಯಾಗಿ ಎಲ್ಲ ಶರಣರಿಗೂ ತಿಳಿಸಿಕೊಡುತ್ತಿದ್ದಾನೆ. ಬಸವಣ್ಣನವರನ್ನು ‘ಭಕ್ತಿ ಭಂಡಾರಿ’ ಎಂಬ ವಿಶಿಷ್ಟ ನುಡಿಯಿಂದ ಶರಣರು ಕರೆಯುವು ದುಂಟಷ್ಟೆ. ಅಲ್ಲಮನೇ ಬಸವಣ್ಣನನ್ನು ಕುರಿತು ಹೇಳುವಾಗ ‘ಭಕ್ತಿ’ ಎಂಬುದರ ಮತ್ತೊಂದು ರೂಪಕ ನೀನೆಂದು ಹೇಳುತ್ತಾನೆ. ‘ಭಕ್ತಿ ಎಂಬ ಸಮಾಧಾನ ಬಸವಣ್ಣನಿಂದ ಎನಗಾಯಿತ್ತು’ (ಅ.ವ.ಚಂ-916) ಎಂದು ಸ್ವಯಂ ಅಲ್ಲಮನೆ ತನ್ನೊಂದು ವಚನದಲ್ಲಿ ಹೇಳಿದ್ದಾನೆ. ‘ಭಕ್ತಿ’ಯನ್ನು ಸೈದ್ಧಾಂತಿಕವಾಗಿ ನೇರ್ಪಡಿಸಿಕೊಳ್ಳುವುದು ಒಂದು ಬಗೆಯಾದರೆ; ಅದನ್ನು ಅನುಭವದಲ್ಲಿ ಪ್ರತ್ಯೇಕೀಕರಿಸುವುದು ಇನ್ನೊಂದು ಬಗೆ. ಈ ರಹಸ್ಯತತ್ತ್ವವು ಅಲ್ಲಮನಿಗೆ ಚೆನ್ನಾಗಿ ತಿಳಿದಿದೆ.
ಬಸವಣ್ಣನ ವಚನಗಳಲ್ಲಿ ಭಕ್ತಿಯ ನೆಲೆಯೂ ಉಂಟು. ಭಕ್ತನ ಸ್ಥಿತಿಯೂ ಉಂಟು. ಅವನ ಹಲವು ವಚನಗಳಲ್ಲಿ ಭಕ್ತಿಸ್ಥಿತಿಯ ವಿವಿಧ ಸ್ತರಗಳ ನೆಲೆಗಳುಂಟು. ‘ಭಕ್ತದೇಹಿಕ ದೇವನಪ್ಪ’(396), ‘ಭಕ್ತನ ಮುಖ ದರ್ಪಣದಲ್ಲಿ’ (145), ‘ಭಕ್ತನಾಗಿ ಲಿಂಗಜಂಗಮ’ (158), ‘ಭಕ್ತನಾಯಿತ್ತೆ ಭಕ್ತಿದಾಸೋಹ’ (936), ‘ಭಕ್ತನೆನಿಸುವೆನಯ್ಯಾ ಮೆಲ್ಲಮೆಲ್ಲನೆ (893), ‘ಭಕ್ತನೆಂತೆಂಬೆನಯ್ಯಾ’ (510), ‘ಭಕ್ತಭಕ್ತನ ಮನೆಗೆ ಬಂದೊಡೆ’ (246), ‘ಭಕ್ತರ ಕಂಡಡೆ ಚೋಳಪ್ಪರಯ್ಯಾ’ (103), ‘ಭಕ್ತರೇ ಸಮರ್ಥರು’ (683). ಇನ್ನು ‘ಭಕ್ತಿ ನೆಲೆ’ಯನ್ನು ಪ್ರಸ್ತಾವಿಸುವ ಹಲವು ವಚನಗಳುಂಟು. ‘ಭಕ್ತಿ ಯಿಲ್ಲದ ಬಡವನಾನಯ್ಯಾ’ (350), ‘ಭಕ್ತಿಯೆಂಬ ನಿಧಾನವ’ (243), ‘ಭಕ್ತಿಯೆಂಬ ಪೃಥ್ವಿಯ ಮೇಲೆ’ (526), ‘ಭಕ್ತಿಯೆಂಬುದ ಮಾಡಬಾರದು’ (212), ‘ಭಕ್ತಿಯೆಳ್ಳನಿತಿಲ್ಲ’ (308), ‘ಭಕ್ತಿರತಿಯ ವಿಕಳತೆಯ’ (515), ‘ಭಕ್ತಿವಿಶೇಷವ ಮಾಡುವರೆ’ (325), ‘ಭಕ್ತಿಹೀನನ ದಾಸೋಹವ’(607) - ಈ ಎಲ್ಲಾ ವಚನಗಳ ಹಿಂದೆ ಬಸವಣ್ಣನ ತೀವ್ರತರದ ಭಕ್ತಿಸ್ಥಿತಿಯ ಆಶಯಗಳುಂಟು.
ಹೀಗಾಗಿ, ಅಲ್ಲಮನು ಬಸವಣ್ಣನ ಬಗೆಗೆ ಹೇಳುವಾಗ ಭಕ್ತಿ ಎಂಬ ಸಮಾಧಾನದ ಸ್ಥಿತಿ ತನಗೆ ಗೊತ್ತಾದದ್ದು ಬಸವಣ್ಣನಿಂದಲೇ ಎಂದು ಹೇಳುವಲ್ಲಿ ಭಕ್ತಿಯ ತೀವ್ರತರ ನೆಲೆಯು ನಮಗೆ ಗೊತ್ತಾಗುತ್ತದೆ. ಬಸವಣ್ಣನ ವಚನವೊಂದನ್ನು ಗಮನಿಸುವುದು ಅವಶ್ಯ. ಭಕ್ತಿಯೆಂಬುದ ಮಾಡಬಾರದು/ ಕರಗಸದಂತೆ ಹೋಗುತ್ತ ಕೊರೆದು, ಬರುತ್ತ ಕೊಯ್ವುದು/ ಘಟಸರ್ಪನಲ್ಲಿ ಕೈದುಡುಕಿದಡೆ ಹಿಡಿವುದ ಮಾಬುದೇ/ ಕೂಡಲ ಸಂಗಮದೇವಾ! ವಇದು ಭಕ್ತಸ್ಥಲದ ವಚನ. ಭಕ್ತಸ್ಥಲವು ಸಾಧಕನ ಮೊದಲ ಮೆಟ್ಟಿಲು. ಅವನು ಮಾಹೇಶ್ವರ ಸ್ಥಲಕ್ಕೆ ಏರಬೇಕಾದರೆ ‘ತಾನು, ತನ್ನದು’ ಎಂಬುದನ್ನು ತೊರೆಯಬೇಕು. ಆಗ ‘ಪ್ರಸಾದಿಸ್ಥಲ’ದ ಇರುವು ಸಾಧಕನಿಗೆ ಗೊತ್ತಾಗುತ್ತದೆ. ಅಲ್ಲಿಂದ ಮುಂದಿನದೇ ‘ಪ್ರಾಣಲಿಂಗಿ’. ಸಾಧಕನಾದವನು ಭಕ್ತ, ಮಾಹೇಶ್ವರ, ಪ್ರಸಾದ, ಪ್ರಾಣಲಿಂಗಿ ನೆಲೆಗೆ ಹತ್ತಬೇಕಾದರೆ ‘ಆತ್ಮಶುದ್ಧಿ’ ಜೊತೆಗೆ ‘ತನುಶುದ್ಧಿ’ ಅಗತ್ಯ. ಬಸವಣ್ಣನ ಈ ವಚನವು ‘ಭಕ್ತ’ನೊಬ್ಬನ ಶುದ್ಧಸ್ಥಿತಿಯ ಅವಸ್ಥೆಯನ್ನು ಸಂಕೇತಿಸುತ್ತದೆ! ನಾವು ಈ ವಚನವನ್ನು ವಾಚ್ಯಾರ್ಥದ ನೆಲೆಯಲ್ಲಿ ಗ್ರಹಿಸಬಾರದು. ಇಲ್ಲಿರುವುದು ಶುದ್ಧಾಂಗವಾಗಿ ಸಂಕೇತಾರ್ಥ ಮಾತ್ರ.
ಚಾಮರಸನು ಅಲ್ಲಮನ ವ್ಯಕ್ತಿತ್ವದ ನೆಲೆಗಳನ್ನು ಅನ್ವೇಷಿಸುತ್ತಿ ರುವುದು ಸರಿಯಷ್ಟೆ. ಬಸವಣ್ಣನು ಅಲ್ಲಮನಲ್ಲಿ ‘ಭಕ್ತಿಯ ನೆಲೆ ಯಾವುದು? ಅದು ಯಾವ ರೀತಿಯಲ್ಲಿ ಇರುತ್ತದೆ?’ ಎಂದಾಗ ಅಲ್ಲಮನು ಒಂದು ಸಾಮತಿಯನ್ನು ನೀಡಿ ‘ಭಕ್ತಿಸ್ಥಿತಿ’ಯನ್ನು ಪರೋಕ್ಷವಾಗಿ ಸಂಕೇತಿಸುತ್ತಾನೆ. ‘ಕುಸುವ ಸೌರಭವು ಇಂತುಂಟೆಂದು ಆರು ಉಸುರ ಬಲ್ಲರು? ತುಂಬಿಯೊಳು ಭಾವಿಸಲು, ಹೂವಿನಲ್ಲಿ ಪರಿಮಳ ಉಂಟಷ್ಟೆ? ಆ ಪರಿಮಳದ ನೆಲೆಯನ್ನು ಯಾರು ಹೇಳಬಲ್ಲರು. ತುಂಬಿಗೂ ಪರಿಮಳಕ್ಕೂ ಅವಿನಾಭಾವ ಸಂಬಂಧ ಉಂಟು! ಆದರೆ, ಸೌರಭದ ನೆಲೆಯನ್ನು ದುಂಬಿ ಹೇಳಲು ಸಾಧ್ಯವೆ?’. ಹಾಗೆ ನೋಡಿದರೆ ಭಕ್ತಿಯ ಇರುವು ನಿನಗೆ ಮಾತ್ರ ಗೊತ್ತು. ಅದರ ಇರುವನ್ನು ಪರೀಕ್ಷಿಸಲು ನೀನೆ ಶ್ರೇಷ್ಠ ಪುರುಷ ಎಂದು ಅಲ್ಲಮಪ್ರಭು ನುಡಿಯುತ್ತಾನೆ. ಅನಂತರ ‘ಇಷ್ಟಲಿಂಗ’ದ ಕೀಲಣೆಯನ್ನು ಅರಿದಲ್ಲದೆ ಆಗದು. ಹೇಳುವೊಡೆ ಶಿವಭಕ್ತಿಯದು, ಸಾಮಾನ್ಯವಲ್ಲೆಂದ (16-53)- ಈ ಮಾತಿನ ತಾತ್ಪರ್ಯ ಇಷ್ಟು. ಇಷ್ಟಲಿಂಗದ ಕ್ರಮವನ್ನು ತಿಳಿದಲ್ಲದೆ ಭಕ್ತಿಯ ರೀತಿಯನ್ನು ತಿಳಿಯಲು ಸಾಧ್ಯವಿಲ್ಲ. ಇದು ಶುದ್ಧಾಂಗವಾಗಿ ಶಿವಭಕ್ತಿ.-ಎಂದು ಅಲ್ಲಮನು ನುಡಿದು ಮೌನವಾದ!
ಅಲ್ಲಮನು ಬಸವಣ್ಣನಲ್ಲಿರುವ ಸದ್ಭಕ್ತಿಸಾರವನ್ನು ಲೋಕಕ್ಕೆ ಎತ್ತಿ ಸಾರುತ್ತಾನೆ. ಭಕ್ತಿಯ ಹಿರಿಮೆಯನ್ನು ತಿಳಿಯ ಬೇಕೆಂದು ಶರಣರು ಬಯಸಿದರೆ ಬಸವಣ್ಣನನ್ನು ಮಾತ್ರ ಆಶ್ರಯಿಸ ಬೇಕಾಗುತ್ತದೆ. ಚಾಮರಸನ ಮಾತಿದು: ಈ ತೆರದೊಳಿಷ್ಟಲಿಂಗ /ಪ್ರೀತಿ ಮಾರ್ಗಾಚಾರವನು ವಿ/ಖ್ಯಾತಿಯುತ ಬಸವಣ್ಣ ಮೊದಲಾದಖಿಳರಿಗೆ/ ಓತು ನಿಯಮಿಸಿ ನಿರ್ವಿಕಾರದ/ ನೀತಿ ನಿಶ್ಚಯ ಭಕ್ತಿಮಾರ್ಗದ/ ರೀತಿದಾಯಕನೊಪ್ಪುತಿರ್ದನು ಗುರು ಗುಹೇಶ್ವರನು (ಪ್ರಭು-ಲೀಲೆ 16-58) ಅಲ್ಲಮನು ಅಲ್ಲಿದ್ದ ಸಮಸ್ತ ಶರಣರಿಗೆ ಇಷ್ಟಲಿಂಗದ ಭಕ್ತಿಮಾರ್ಗದ ಇರುವನ್ನು ಬೋಧಿಸಿ-ಸಮಸ್ತ ಲೋಕವನ್ನು ರಕ್ಷಿಸುತ್ತಿದ್ದನು.