

ಶಿವಮೊಗ್ಗ: ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಮೈದಾನ ಪಾಲಿಕೆಗೆ ಸೇರಿದ ಸ್ವತ್ತು. ಈ ಸರ್ಕಾರಿ ಜಾಗದ ಅಸಲಿ ದಾಖಲೆಗಳನ್ನು ಪರಿಶೀಲಿಸಿ ಆಸ್ತಿ ಉಳಿಸಬೇಕೆಂದು ಆಗ್ರಹಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಸೋಮವಾರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಕ್ಫ್ ಬೋರ್ಡ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮೈದಾನ ತಮ್ಮದೆಂದು ಪ್ರತಿಪಾದಿಸಲು ಹೊರಟಿವೆ. ಈಗಾಗಲೇ ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಆಯುಕ್ತರಿಗೆ ಮನವಿ ನೀಡಿದ್ದೇವೆ. ನ್ಯಾಯಾಲಯ ಕೂಡ 8 ವಾರಗಳ ಅವಧಿಯಲ್ಲಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿತ್ತು. ಈಗ ಆ ಅವಧಿ ಮುಕ್ತಾಯವಾಗಿದೆ. ಈಗ ಮೂಲ ದಾಖಲೆಗಳು ಮತ್ತು ಯಥಾ ನಕಲು ಪ್ರತಿಗಳನ್ನು ಪಾಲಿಕೆಗೆ ನೀಡಲಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಸರ್ಕಾರದ ಗೆಜೆಟ್ ನೋಟಿಫಿಕೇಷನ್, 1965ರಿಂದ 75ರವರೆಗಿನ ಭೂಕಂದಾಯ ಪುಸ್ತಕ ಸಂಖ್ಯೆ 4ರ 17/18ನೇ ಪುಟ ಮತ್ತು 1990ರಿಂದ 96ರವರೆಗಿನ ಎಂ.ಆರ್.ನಂ.19ರ ವಿಭಾಗ -4, ಪುಸ್ತಕ 5 ಪುಟ 84 ಹಾಗೂ 1995-96ರ ಎಂ.ಆರ್.ನಂ.29ರ ವಿಭಾಗ 4 ಪುಸ್ತಕ ಸಂಖ್ಯೆ 13, ಕ್ರಮ ಸಂಖ್ಯೆ 1473 ಮತ್ತು ಅಂದಿನ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರ ಹಾಗೂ 2031ರವರೆಗಿನ ಸಿಡಿಪಿ ಯೋಜನೆಯ ನಕ್ಷೆಯನ್ನು ಮನವಿಯೊಂದಿಗೆ ನೀಡಿದರು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಯುಕ್ತ ಮಾಯಣ್ಣಗೌಡ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 2019-2020-2021ರಲ್ಲಿ ಮೂರು ಬಾರಿ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕರ್ನಾಟಕ ರಾಜ್ಯ ಪಾಲಿಕೆ ನಿಯಮ 114ಎ ಅಡಿಯಲ್ಲಿ ಅರ್ಜಿ ದಾಖಲಾಗಿದ್ದು, ಘನ ನ್ಯಾಯಾಲಯ ಕೂಡ ಮರು ಪರಿಶೀಲನೆಗೆ ಸೂಚಿಸಿ ಗಡುವು ನೀಡಿತ್ತು. ಒಂದು ಪ್ರಕರಣ ನ್ಯಾಯಾಲಯದ ಆದೇಶಕ್ಕೆ ಸಿದ್ಧವಾಗಿದ್ದು, ಇನ್ನೊಂದು ಪ್ರಕರಣದಲ್ಲಿ ನ್ಯಾಯಾಲಯದಿಂದ ವಿಚಾರಣೆ ಬಾಕಿ ಇದೆ. ನ್ಯಾಯಾಲಯಕ್ಕೆ ನಾವು ಸೂಕ್ತ ದಾಖಲೆ ಒದಗಿಸುತ್ತೇವೆ ಎಂದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಲೋಕೇಶ್, ಶಿವಾಜಿ, ಸತ್ಯನಾರಾಯಣ ಕಾಚಿನಕಟ್ಟೆ, ಶಂಕರನಾಯ್ಕ, ಜಾಧವ್, ಅ.ಮ.ಪ್ರಕಾಶ್, ಕುಬೇರಪ್ಪ ಮುಂತಾದವರಿದ್ದರು.