

ಸಾಗರ: ಸಮಾನತೆ, ಸಮ ಸಮಾಜದ ನಿರ್ಮಾಣ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಿದವರು ಭಕ್ತಿ ಭಂಡಾರಿ ಬಸವಣ್ಣ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಹೇಳಿದರು.
ಸಾಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸುಧಾರಣಾ ಮಾರ್ಗವನ್ನು ಹಾಕಿಕೊಟ್ಟವರು ಬಸವಣ್ಣ. ಅನುಭವ ಮಂಟಪದ ಮೂಲಕ ಹೊಸ ಚರ್ಚಾ ವೇದಿಕೆಯನ್ನು ನಿರ್ಮಿಸಿಕೊಟ್ಟರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಜನರ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಿದ್ದಾರೆ. ಜಾತಿಪದ್ಧತಿ, ಅಸ್ಪಶ್ಯತೆ ನಿವಾರಣೆ, ಮೇಲು-ಕೀಳು, ಮೌಢ್ಯ ನಿವಾರಣೆಗೆ ವಚನಗಳ ರಚನೆ ಮೂಲಕ ಪ್ರಯತ್ನಿಸಿದವರು ಬಸವಣ್ಣ ಎಂದು ಬಣ್ಣಿಸಿದರು.
ಉಪನ್ಯಾಸ ನೀಡಿದ ಉಪನ್ಯಾಸಕಿ ಜ್ಯೋತಿ ಆನಂದ್, ದೇವಾಲಯಗಳ ಬದಲು ಮನುಷ್ಯನ ದೇಹವೇ ದೇಗುಲ ಎಂದ ಮಹಾ ಮಾನವತಾವಾದಿ ಬಸವಣ್ಣ. ಸಮ ಸಮಾಜ ನಿರ್ಮಾಣಕ್ಕೆ ವಚನಗಳ ಮೂಲಕ ಅಡಿಪಾಯ ಹಾಕಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದರು.
ತಹಸೀಲ್ದಾರ್ ಚಂದ್ರಶೇಖರ್ ನಾಯಕ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ವಿ.ಪ್ರವೀಣ್, ವೀರಶೈವ ಸಮಾಜದ ಅಧ್ಯಕ್ಷ ಬಸವರಾಜ ಗುಂಡಾಲಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕೆ.ಎಚ್.ಜ್ಞಾನೇಶ್ವರ್, ಮಧುಮಾಲತಿ, ವಿರೂಪಾಕ್ಷಪ್ಪ, ಕವಿತಾ ಜಯಣ್ಣ ಇತರರಿದ್ದರು.