ಜಾತಿ ಜನಗಣತಿ ಜಾರಿಯಿಂದ ಸಮಾನತೆ ಸಾಧ್ಯ

23 KRN-1
ಕೆ.ಆರ್.ನಗರ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿ ಮರು ಚಾಲನಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯರಾದ ಸಿದ್ದಪ್ಪ, ರಾಜಯ್ಯ ಮತ್ತಿತರರು ಇದ್ದರು.
Published on

ಕೆ.ಆರ್.ನಗರ: ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಅಂಗೀಕರಿಸಿ ಜಾರಿಯಾದಾಗ ಮಾತ್ರ ಸರ್ವರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸಮಾನತೆ ದೊರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ಹಾಸನ-ಮೈಸೂರು ರಸ್ತೆಯ ಬಳಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ ಮರು ಚಾಲನೆ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ವರದಿ ಈವರೆಗೆ ಸರ್ಕಾರಕ್ಕೆ ಬಂದಿಲ್ಲ. ಆದರೆ ಈಗಾಗಲೇ ಆ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ ಎಂದ ಅವರು, ವರದಿಯನ್ನು ಸ್ವೀಕರಿಸಿದ ನಂತರ ಸಂಪುಟ ಸಭೆಯಲ್ಲಿ ಅದನ್ನು ಅನುಮೋದಿಸಿ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸಿ ಎಲ್ಲರ ಸಲಹೆ ಮತ್ತು ಸಹಕಾರ ಪಡೆದು ಅನುಷ್ಠಾನಗೊಳಿಸಲು ನಿರ್ಧಾರ ಮಾಡಲಾಗುತ್ತದೆ ಎಂದರು.

ಸಮಾಜದಲ್ಲಿನ ಅಸಮಾನತೆ ತೊಡೆಯಲು ಜಾತಿ ಜನಗಣತಿ ಅತ್ಯಂತ ಅವಶ್ಯಕವಾಗಿದ್ದು ಈ ವಿಚಾರದಲ್ಲಿ ಎಲ್ಲರೂ ಪ್ರಜ್ಞಾವಂತರಾಗಿ ಚಿಂತನೆ ಮಾಡಬೇಕೆಂದ ಸಚಿವರು, ಇಂತಹ ಸೂಕ್ಷ್ಮ ವಿಚಾರಗಳನ್ನು ಅನುಷ್ಠಾನ ಮತ್ತು ಜಾರಿ ಮಾಡುವಾಗ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.

ನಿಗದಿತ ಅವಧಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಕೊಡಿಸಲಾಗುತ್ತದೆ. ಈ ವಿಚಾರದಲ್ಲಿ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಶಾಸಕ ಡಿ.ರವಿಶಂಕರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ಪ್ರೇರಕ ಶಕ್ತಿಯಾಗಿದ್ದು, ಅವರು ನೀಡಿದ ಶ್ರೇಷ್ಠ ಸಂವಿಧಾನದಿಂದ ಪ್ರತಿಯೊಬ್ಬರೂ ಸಮಾನತೆಯ ಬದುಕು ಸಾಧಿಸಲು ಸಾಧ್ಯವಾಗಿದೆ. ಅಂತಹ ಮಹಾನ್ ಪುರುಷ ನಮ್ಮ ದೇಶದಲ್ಲಿ ಜನಿಸಿದ್ದು ಎಲ್ಲರ ಪುಣ್ಯ ಎಂದರು.

ರಾಜ್ಯ ಸರ್ಕಾರ ಪ್ರತಿ ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಕಾಳಜಿ ವಹಿಸಿ ಕೆ.ಆರ್.ನಗರ ತಾಲೂಕಿಗೆ ಹೆಚ್ಚುವರಿಯಾಗಿ ಮತ್ತೆ 4 ಕೋಟಿ ರೂ. ಕೊಡಿಸಿ ಕೊಡಬೇಕೆಂದು ಕೋರಿಕೊಂಡ ಅವರು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಬೇಕೆಂದು ಬೇಡಿಕೆ ಸಲ್ಲಿಸಿದರು.

ಭವನ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ಪಟ್ಟಣದಲ್ಲಿ ಈಗಿರುವ ಅಂಬೇಡ್ಕರ್ ಅವರ ಪ್ರತಿಮೆಯನ್ನು ಬದಲಿಸಬೇಕೆಂಬ ಸಮುದಾಯದವರ ಕೋರಿಕೆ ಮೇರೆಗೆ ನೂತನವಾಗಿ ಭವ್ಯ ಪ್ರತಿಮೆಯನ್ನು ವೈಯಕ್ತಿಕ ಹಣದಲ್ಲಿ ಸ್ಥಾಪಿಸಿ ಕೊಡುವುದಾಗಿ ತಿಳಿಸಿದ ಸಚಿವರು, ಈ ವಿಚಾರದಲ್ಲಿ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ: ಪಟ್ಟಣದ ಸರ್ಕಾರಿ ಪ್ರಥಮ ಕಾಲೇಜಿನ ಸಮೀಪ ಈ ಹಿಂದೆ ಇದ್ದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯ ನವೀಕರಣಗೊಂಡ ನಂತರ ಮೆಟ್ರಿಕ್ ನಂತರದ ಪರಿಶಿಷ್ಟ ಸಮುದಾಯದ ಬಾಲಕರ ವಿದ್ಯಾರ್ಥಿ ನಿಲಯ ಎಂದು ಬದಲಾವಣೆ ಮಾಡಿದ್ದು ಮತ್ತೆ ಸಂವಿಧಾನ ಶಿಲ್ಪಿ ಹೆಸರನ್ನೇ ಇಡಬೇಕೆಂದು ಸಮುದಾಯದವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನಾನು ಕೂಡ ಸಚಿವರಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಸೂಕ್ತ ನಿವೇಶನ ಗುರುತಿಸಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಭೆಗೆ ಮಾತು ನೀಡಿದರು.

ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮಾತನಾಡಿ, ನಮ್ಮ ಸಮುದಾಯದವರ ಎರಡು ದಶಕಗಳ ಕನಸು ಇಂದು ಈಡೇರುತ್ತಿದ್ದು ಸಚಿವರು ಮತ್ತು ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಸುಸಜ್ಜಿತ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಿ ಉದ್ಘಾಟಿಸಿ ಕೊಡಬೇಕೆಂದರಲ್ಲದೆ ಜಾತಿ ಜನಗಣತಿ ಜಾರಿಗೆ ತರುವಲ್ಲಿ ಹೋರಾಟ ಮಾಡಬೇಕೆಂದು ತಿಳಿಸಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯ ರಾಜಯ್ಯ ಮಾತನಾಡಿದರು. ಕಾಂತರಾಜು ಆಯೋಗದ ಜನಗಣತಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ದಲಿತ ಒಕ್ಕೂಟದಿಂದ ಪುರಸಭಾ ಸದಸ್ಯ ನಟರಾಜು, ಮುಖಂಡರಾದ ಮಾರಗೌಡನಹಳ್ಳಿ ರಾಜೇಶ್, ವಿ.ಸುರೇಶ್ ಮಧುವನ, ಹೊಸಕೋಟೆ ಚಲುವರಾಜು, ಹೆಬ್ಬಾಳು ಮಂಜು, ರವಿ ಪೂಜಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಸಚಿವ ಡಾ.ಎಸ್.ಸಿ.ಮಹದೇವಪ್ಪ ಮತ್ತು ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯರಾದ ಕೋಳಿ ಪ್ರಕಾಶ್, ಶಂಕರ್‌ಸ್ವಾಮಿ, ಶಿವು ನಾಯಕ್, ನಟರಾಜು, ಮಾಜಿ ಅಧ್ಯಕ್ಷೆ ಗೀತಾ ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಎಸ್ ಮಹದೇವ್, ಉದಯಶಂಕರ್, ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಕೆ.ಆರ್.ನಗರ ತಾಲೂಕು ಘಟಕದ ಅಧ್ಯಕ್ಷ ನಂದೀಶ್, ವಕೀಲ ಕಾಂತರಾಜು, ದಲಿತ ಮುಖಂಡರಾದ ಮಂಜುರಾಜ್, ಹೊಸಕೋಟೆ ಚಲುವರಾಜು, ಕಳ್ಳಿ ಮುದ್ದನಹಳ್ಳಿ ಚಂದ್ರು, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಜಿ.ಕೆ.ಹರೀಶ್, ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ, ಪಿಡಬ್ಲುೃಡಿ ಎಇಇ ಸುಮಿತಾ, ಜೆಇ ಉಮೇಶ್, ಚಂದ್ರ, ಅಧಿಕಾರಿ ಎಸ್.ಎಂ.ಅಶೋಕ್‌ಕುಮಾರ್ ಮತ್ತಿತ್ತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net