ಸಮಾನತೆ, ಸಹಬಾಳ್ವೆ ಅಗತ್ಯ

ವಿಜಯವಾಣಿ (11)
Published on

ಜಗತ್ತು ಯೇಸುವಿನ ಜನನವನ್ನು ಸಾರುವ ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ಒಂದು ಹೊಸ ಸಂಚಲನ ಮೂಡುತ್ತದೆ. ಜಗದೆಲ್ಲೆಡೆ ಹಬ್ಬದ ವಾತಾವರಣ. ಎಲ್ಲೆಲ್ಲೂ ವಿದ್ಯುದ್ದೀಪಾಲಂಕೃತ ಕಟ್ಟಡಗಳು, ಉಡುಪು, ಉಡುಗೊರೆ ಹಾಗೂ ಜನರಿಂದ ತುಂಬಿ ತುಳುಕುವ ಶಾಪಿಂಗ್ ಮಾಲ್ ಗಳು, ಬಗೆ ಬಗೆಯ ಕೇಕ್, ಕುಸ್ವಾರ್ ಹಾಗೂ ತಿಂಡಿ ತಿನಿಸುಗಳು ತುಂಬಿರುವ ಬೇಕರಿಗಳು, ನಕ್ಷತ್ರಾಲಂಕೃತ ಮನೆ ಮುಂದಿರಗಳು ಇತ್ಯಾದಿ. ಹೌದು.

ಕ್ರಿಸ್ಮಸ್ ಒಂದು ಸಾರ್ವತ್ರಿಕ ಹಬ್ಬ. ಬಾಹ್ಯ ಸಡಗರದ ಜೊತೆಗೆ, ಪ್ರೀತಿಯ ಸೇತುವೆಗಳನ್ನು ಕಟ್ಟುವ ಹಬ್ಬ. ಇದು ಶಾಂತಿ ದೂತ ಪ್ರಭು ಯೇಸು ಕ್ರಿಸ್ತರ ಜನನದ ಹಬ್ಬ. ಯೇಸು ಕ್ರಿಸ್ತರ ಜನನದ ಪೀಠಿಕೆ ಈ ರೀತಿ ಇದೆ. ಜನರಲ್ಲಿ ಪಾಪದ ಅಂಧಕಾರ ಆವರಿಸಿತ್ತು, ಧನಿಕರಿಂದ ಶ್ರೀಸಾಮಾನ್ಯರ ಶೋಷಣೆ ನಡೆಯುತ್ತಿತ್ತು. ಸಾಮಾನ್ಯರು ಬಡತನದ ಬೇಗೆಯಲ್ಲಿ ಬೆಂದು ನೊಂದು ಕಂಗಾಲಾಗಿದ್ದರು. ಅವರನ್ನು ಈ ಎಲ್ಲಾ ಬಂಧನಗಳಿಂದ ಮುಕ್ತಿಗೊಳಿಸುವುದಕ್ಕಾಗಿಯೇ ಯೇಸು ಕ್ರಿಸ್ತರ ಜನನವಾಯಿತು.

ಈ ಉದ್ದೇಶದಂತೆಯೇ ಯೇಸು ಕ್ರಿಸ್ತರು ಬೋಧಿಸಿದರು, ಭೋದಿಸಿದಂತೆಯೇ ಬದುಕಿದರು, ಇತರರಿಗೆ ಬದುಕಲು ಕಲಿಸಿದರು. ಪ್ರೀತಿ ಮತ್ತು ಕ್ಷಮೆಯ ಬದುಕಿನಿಂದ ಅಮರರಾದರು. ಇಂದಿನ ಪರಿಸ್ಥಿತಿ ನೋಡುವಾಗ ಯೇಸು ಕ್ರಿಸ್ತರು ಮಗದೊಮ್ಮೆ ಹುಟ್ಟಿಬರುವ ಅಗತ್ಯ ಕಾಣುತ್ತದೆ. ಯುದ್ಧ, ದ್ವೇಷ, ಶೋಷಣೆ ಮತ್ತು ವಿಭಜನೆಯ ಕಾರ್ವೇಡಗಳಿಂದ ಪಾಪದ ಅಂಧಕಾರ ಆವರಿಸಿದೆ. ಬದುಕಿನ ಬವಣೆಗಳಿಂದ ಮುಕ್ತಿ ನೀಡುವ ಮೋಕ್ಷಕನನ್ನು ಜನರು ಎದುರು ನೋಡುತ್ತಿದ್ದಾರೆ.

ಇತ್ತೀಚೆಗೆ ರೋಮ್ ನ ವ್ಯಾಟಿಕನ್​ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವದಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಇದೇ ವಿಷಯವನ್ನು ಉಲ್ಲೇಖಿಸಿ ಸಮಾನತೆ, ಸಹಬಾಳ್ವೆ, ಸಹೋದರತೆ , ಸಂವಾದ ಮತ್ತು ಸಹಕಾರ ಇಂದಿನ ಸಮಾಜದ ಬಹು ಮುಖ್ಯ ಅಗತ್ಯ. ಈ ದಿಶೆಯಲ್ಲಿ ಶ್ರೀನಾರಾಯಣ ಗುರುಗಳ ತತ್ವಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು. ಈ ಕ್ರಿಸ್ಮಸ್ ಆ ಅಗತ್ಯಗಳನ್ನು ಈಡೇರಿಸುವ ಹಬ್ಬವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net