

‘ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಬೇಡಿಕೆಯಂತೆ ಉನ್ನತ ಶಿಕ್ಷಣದಲ್ಲಿ ಪರಿಸರ ಕುರಿತ ಪಠ್ಯಕ್ರಮವನ್ನು ಅಳವಡಿಸಲಾಗುವುದು’ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ರಾಜ್ಯದ ಎಲ್ಲ ಶಾಲೆಗಳಲ್ಲಿ ಪರಿಸರ ಮತ್ತು ಹವಾಮಾನ ಕ್ಲಬ್ ಸ್ಥಾಪಿಸುವ ನಿರ್ಧಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿಯ ಈ ಮಾತುಗಳು ಹೊಮ್ಮಿವೆ. ಅಲ್ಲದೆ, ಮಾಲಿನ್ಯ ತಡೆಗೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಇತ್ತೀಚೆಗೆ ನಡೆದ ‘ವಿಜಯವಾಣಿ’ ಸಂವಾದದಲ್ಲಿ ಹೇಳಿದ್ದಾರೆ.
ಪರಿಸರ ಸಂರಕ್ಷಣೆಯ ಕುರಿತು ಇಂಥ ಸಾಮೂಹಿಕ ಸಂಕಲ್ಪ ಮತ್ತು ಬದ್ಧತೆ ಇಂದಿನ ಅಗತ್ಯ. ಶಾಲಾ ಹಂತದಿಂದಲೇ ಪರಿಸರದ ಕುರಿತಾಗಿ ಸೂಕ್ತ ಶಿಕ್ಷಣ, ಅರಿವು ನೀಡುವುದು ಅಗತ್ಯವಾಗಿದೆ. ಪರಿಸರಕ್ಕೆ ಸಂಬಂಧಪಟ್ಟ ಕಳವಳಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಿಕ್ಷಣದ ಮುಖೇನ ಜಾಗೃತಿ ಆರಂಭವಾದರೆ ನಿಜವಾದ ಪರಿವರ್ತನೆ ಸಾಧ್ಯವಾಗಬಹುದು. ಉನ್ನತ ಶಿಕ್ಷಣದಲ್ಲಿ ಈ ಕುರಿತಾಗಿ ಪಠ್ಯ ಅಳವಡಿಕೆಯಾದರೆ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಲು, ಪ್ರಸಕ್ತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಪರಿಸರವನ್ನು ಪ್ರೀತಿಸುವ, ಪೋಷಿಸಿ, ಬೆಳೆಸುವ ಮನೋಭಾವ ಬೆಳೆಯಬೇಕಾದರೆ ಆ ಮೌಲ್ಯ ಶಿಕ್ಷಣದಿಂದಲೇ ಅಳವಡಿಕೆಯಾಗಬೇಕು. ಈ ಕುರಿತಾಗಿ ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದ್ದು, ಪರಿಣಾಮಕಾರಿ ಬೋಧನೆ ಮೂಲಕ ವಿದ್ಯಾರ್ಥಿಗಳನ್ನು ಪರಿಸರ ರಕ್ಷಣೆಯ ಸೇನಾನಿಗಳನ್ನಾಗಿ ರೂಪಿಸಬೇಕು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆ ಮತ್ತು ಅದು ಸೃಷ್ಟಿಸುತ್ತಿರುವ ಅಪಾರ ತ್ಯಾಜ್ಯದ ಬಗ್ಗೆಯೂ ಸಿಎಂ ಹಾಗೂ ಡಿಸಿಎಂ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಜತೆಗೆ ಕಸದ ಪ್ರಮಾಣವನ್ನು ತಗ್ಗಿಸಲು ಶ್ರಮಿಸಬೇಕಾಗಿದೆ. ಪರಿಸರ ಪ್ರೀತಿ ಎಂಬುದು ಬರೀ ಘೋಷಣೆ ಅಥವಾ ಭಾಷಣದ ಅಬ್ಬರವಾಗಬಾರದು. ಇದಕ್ಕೆ ಸಂಬಂಧಿಸಿದ ಕ್ರಮಗಳನ್ನು ನಿತ್ಯಾನುಷ್ಠಾನಕ್ಕೆ ತಂದು, ಜೀವನಶೈಲಿಯನ್ನು ಸಕಾರಾತ್ಮಕವಾಗಿ ಬದಲಿಸಿಕೊಂಡಲ್ಲಿ ಮಾತ್ರ ಪರಿಸರದ ಉಳಿವಿಗೆ, ಆ ಮೂಲಕ ಮನುಕುಲದ ಉಳಿವಿಗೆ ಸಣ್ಣ ಕೊಡುಗೆ ನೀಡಲು ಸಾಧ್ಯ.
ಕಾಲದ ಓಟದಲ್ಲಿ ತಂತ್ರಜ್ಞಾನದ ಭರಾಟೆ, ತಥಾಕಥಿತ ಅಭಿವೃದ್ಧಿಯ ವೇಗ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಿಸಿರುವುದು ವಾಸ್ತವ. ಭಾರತೀಯ ಜೀವನ ಪದ್ಧತಿ ಮೊದಲಿನಿಂದಲೂ ನಿಸರ್ಗಸ್ನೇಹಿ. ಪರಿಸರಕ್ಕೆ ಧಕ್ಕೆ ಆಗದಂತೆ, ಪರಿಸರಕ್ಕೆ ಪೂರಕವಾದ ವಾತಾವರಣದಲ್ಲೇ ನಮ್ಮ ಹಿರಿಯರು ಜೀವನ ಕಟ್ಟಿಕೊಳ್ಳುತ್ತಿದ್ದರು. ಮತ್ತು ಈ ಮೌಲ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬಂದರು.
ಹಾಗಾಗಿಯೇ, ನಮ್ಮಲ್ಲಿ ಪ್ರಕೃತಿಯನ್ನು ದೇವರಾಗಿ, ಶಕ್ತಿಯಾಗಿ ಪೂಜಿಸಲಾಗುತ್ತದೆ. ನೀರು, ಮಣ್ಣು, ಬೆಂಕಿ ಎಲ್ಲವೂ ಶ್ರದ್ಧೆಯ ಕೇಂದ್ರಸ್ಥಾನಗಳೇ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಾಶ್ಚಾತ್ಯರ ಜೀವನಶೈಲಿಯ ಅನುಕರಣೆಯಿಂದ ಪರಿಸರಕ್ಕೆ ವಿಮುಖವಾಗಿ ಸಾಗುತ್ತಿರುವುದು ದುರಂತ. ಪರಿಸರದ ರಕ್ಷಣೆಯನ್ನು ನಿರ್ಲಕ್ಷಿಸಿದರೆ ಯಾವೆಲ್ಲ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ವರ್ಷಗಳ ಅವಘಡಗಳೇ ಸಾಕ್ಷಿಯಾಗಿವೆ. ಹವಾಮಾನ ಬದಲಾವಣೆ, ಹೆಚ್ಚುತ್ತಿರುವ ತಾಪಮಾನ, ಅಕಾಲಿಕ ಮಳೆ, ಚಂಡಮಾರುತ, ಭೂಕುಸಿತ, ಕರಗುತ್ತಿರುವ ಹಿಮ ಹೀಗೆ ಸಾಲು-ಸಾಲು ಸಮಸ್ಯೆಗಳು ಕಣ್ಣೆದುರಿಗೆ ಇವೆ. ಇವುಗಳ ಗಂಭೀರತೆಯನ್ನು ಪಠ್ಯಕ್ರಮದ ಮೂಲಕ ತಿಳಿಸಿಕೊಟ್ಟು, ಪರಿಸರಸ್ನೇಹಿಯಾಗಿ ಬದುಕಲು ಕಲಿಸಿಕೊಟ್ಟರೆ ನಿಜವಾದ ಸಾರ್ಥಕತೆ. ಅಂಥ ಪ್ರಯತ್ನ ಪರಿಣಾಮಕಾರಿಯಾಗಿ ನಡೆಯಲಿ.