

ವಿಜಯಪುರ : ಮಾನವನ ಆಸೆಗಳನ್ನು ಈಡೇರಿಸುವ ಶಕ್ತಿಯು ಪರಿಸರಕ್ಕಿದೆ. ಆದರೆ ಮಾನವನ ದುರಾಸೆಗಳನ್ನಲ್ಲ ಎನ್ನುವ ಮಾತನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಎಂ.ಎ.ಮನಿಯಾರ ಅಭಿಪ್ರಾಯಪಟ್ಟರು.
ನಗರದ ರಂಭಾಪುರ ಬಡಾವಣೆಯಲ್ಲಿರುವ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಭಿವೃದ್ಧಿಯ ಹೆಸರಿನಲ್ಲಿ ಮಾನವನಿಂದ ಪರಿಸರದ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿದೆ. ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ ಹಾಗೂ ಕಾರ್ಖಾನೆಗಳು ಹೊರ ಸೂಸುವ ಹೊಗೆಯಿಂದ ಕ್ಲೋರೋಪ್ಲೋರ್ ಕಾರ್ಬನ್ ಬಿಡುಗಡೆಯಾಗಿ ಓಝೋನ್‌ನಲ್ಲಿ ರಂಧ್ರಗಳು ನಿರ್ಮಾಣವಾಗುತ್ತಿವೆ. ಇದರಿಂದ ಸೂರ್ಯನಿಂದ ಬರುವ ನೇರಳಾತೀಕ ಕಿರಣಗಳು ನೇರವಾಗಿ ಭೂಮಿಯನ್ನು ಸ್ಪರ್ಶಿಸುವುದರಿಂದ ಮಾನವರ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಹೇಳಿದರು.
ಕಾಲೇಜಿನ ಕನ್ನಡ ಉಪನ್ಯಾಸಕ ಆನಂದ ಬಿರಾದಾರ ಮಾತನಾಡಿ, ಮನುಷ್ಯನಿಗೆ ರೋಗ ನಿರೋಧಕ ಶಕ್ತಿಯು ಕಾಯಿಲೆಯ ವಿರುದ್ಧ ಹೋರಾಡುವ ರೀತಿ ಓಝೋನ್ ಪದರವು ಭೂಮಿಯನ್ನು ರಕ್ಷಾ ಕವಚದಂತೆ ಕಾಪಾಡುತ್ತದೆ. ಆದರೆ ಇಂದು ಮಾನವನ ಆಧುನಿಕ ಜೀನವ ಶೈಲಿಗಳಾದ ಎ.ಸಿ., ರೆಫ್ರಿಜರೆಟರ್, ಪ್ರಿಜ್ ಇತ್ಯಾದಿಗಳಿಂದಾಗಿ ವಾತಾವರಣದಲ್ಲಿ ಇಂಗಾಲ ಡೈ ಆಕ್ಸೈಡ್ ಬಿಡುಗಡೆಯಾಗಿ ಓಝೋನ್ ಪದರು ಸವಕಳಿಯಾಗುತ್ತಿದೆ ಎಂದರು.
ನಮಗೆ ಪರಿಸರ ಅಗತ್ಯವಿದೆ ವಿನಹ ಪರಿಸರಕ್ಕೆ ನಮ್ಮ ಅಗತ್ಯವಿಲ್ಲ. ಆದಕಾರಣ ಪ್ರಕೃತಿಯ ನಿಯಮಗಳಿಗನುಗುಣವಾಗಿ ನಾವು ಜೀವಿಸಬೇಕು. ಭೌಗೋಳಿಕವಾಗಿ ಭೂಮಿಯ ಸಮತೋಲದಿಂದ ಇರಬೇಕೆಂದರೆ ಶೇ.30 ರಷ್ಟು ಅರಣ್ಯವಿರಬೇಕು. ಆದರೆ ಇಂದು ಅರಣ್ಯವು ಶೇ.10ರಿಂದ 15 ಕ್ಕೆ ಇಳಿದಿರುವುದು ಜಾಗತಿಕ ತಾಪಮಾನ ಮತ್ತು ಓಝೋನ್ ಪದರಿನ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ಇಷ್ಟು ಆದರೂ ಕೂಡ ಅಭಿವೃದ್ಧಿಯ ಪರಾಕಾಷ್ಠೆಯನ್ನು ತಲುಪಲು ಜಗತ್ತಿನಾದ್ಯಂತ ದೇಶಗಳು ನಾಮುಂದು ತಾ ಮುಂದು ಎಂಬ ಸ್ಪರ್ಧೆಯಲ್ಲಿ ಭೂಮಿಯನ್ನು ತಾಯಿಯ ಗರ್ಭದಲ್ಲಿರುವ ಮಗುವಿನ ರೀತಿ ಸುರಕ್ಷಿತವಾಗಿ ರಕ್ಷಿಸುವ ಓಝೋನ್‌ನ್ನು ಕಾಪಾಡುವುದನ್ನು ಮರೆತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಕಾಲೇಜಿನ ಉಪ ಪ್ರಾಚಾರ್ಯ ಜಯತೀರ್ಥ ಪಂಡರಿ ಮಾತನಾಡಿ, ಸೂರ್ಯನ ಕಿರಣಗಳು ಓಝೋನ್ ರಂಧ್ರದ ಮೂಲಕ ಪ್ರವೇಶಿಸಿದರೆ ಚರ್ಮದ ಕ್ಯಾನ್ಸರ್ ಮಾನವನ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಜಲಮೂಲ, ಸಸ್ಯ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಅತಿಯಾದ ರಾಸಾಯನಿಕಗಳನ್ನು ಬಳಕೆ ಮಾಡುವುದು ಕೂಡ ಓಝೋನ್ ಸವಕಳಿಗೆ ಕಾರಣವಾಗಿದೆ. ಆದ್ದರಿಂದ ಓಝೋನ್ ಪದರನ್ನು ರಕ್ಷಿಸುವುದು ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಶಾಜು ಜೋಸೆಫ್, ಸಂಗಮೇಶ ಕಮಲಾಪುರ, ಶ್ರೀರಂಗ ಮತ್ತಿತರರು ಉಪಸ್ಥಿತರಿದ್ದರು. ಸಾಮಿಯಾತಾಜ್ ಕಾಖಂಡಕಿ ಕಾರ್ಯಕ್ರಮ ನಿರೂಪಿಸಿದರು, ಭಾವನಾ ತೆನಿಹಳ್ಳಿ ಸ್ವಾಗತಿಸಿದರು. ಸ್ವಾತಿ ವಂದಿಸಿದರು.