ಬಿಎಚ್ ವಿಸ್ತರಣೆಯಿಂದ ಪರಿಸರಕ್ಕೆ ಹಾನಿ

Anantha hegde ashisaraa
ಅನಂತ ಹೆಗಡೆ ಅಶೀಸರ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ
Published on

ಶಿವಮೊಗ್ಗ: ಸಾಗರ-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ (ಬಿ.ಎಚ್.ರಸ್ತೆ) ಅಗಲೀಕರಣದಿಂದ ಕೊಲ್ಲಿಬಚ್ಚಲು, ಕರಡಿಬೆಟ್ಟ ಕಣಿವೆಗೆ ಹಾನಿ ಉಂಟಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಕೈ ಬಿಡಬೇಕೆಂದು ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು.

ಯೋಜನೆಯಿಂದ ಬೃಹತ್ ಪ್ರಮಾಣದ ಅರಣ್ಯ ನಾಶವಾಗಲಿದೆ. ಭವಿಷ್ಯದಲ್ಲಿ ಭೂಕುಸಿತ ಪ್ರಮಾಣ ಹೆಚ್ಚಲಿದೆ. ಅಮ್ಮನ ಕೆರೆ ಜಲಾನಯನ ಛಿದ್ರವಾಗಲಿದೆ. ಕರಡಿ ಬೆಟ್ಟದಲ್ಲಿರುವ ಸುಮಾರು 1,300 ಎಕರೆ ಅರಣ್ಯ ನಾಶವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಕೊಲ್ಲಿಬಚ್ಚಲು ಕಣಿವೆಯ ಕರಡಿ ಬೆಟ್ಟ ಅರಣ್ಯ ಪ್ರದೇಶದಿಂದ ಸುಮಾರು 10 ಎಕರೆಗಳಿಗೆ ನೀರು ಹೋಗುತ್ತದೆ. ಅಲ್ಲದೆ ಲಿಂಗನಮಕ್ಕಿ ಶರಾವತಿ ಜಲಾಶಯನಕ್ಕೆ ಇಲ್ಲಿನ ಹಳ್ಳಗಳಿಂದಲೇ ನೀರು ಹರಿಯುತ್ತದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬೇಡ ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ. ಈ ಹಿಂದೆ ಇದೇ ಕಾರಣಕ್ಕೆ ಕೊಲ್ಲಿಬಚ್ಚಲು ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಅರಣ್ಯ ಇಲಾಖೆ ಅನುಮತಿಯಿಲ್ಲದೆ ಇಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದೆಂದು ಒತ್ತಾಯಿಸಿದರು.
ಗಿಳಾಲಗುಂಡಿ-ಕೋಣೆಹೊಸೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಿದೆ. ಇದನ್ನೇ ಅಭಿವೃದ್ಧಿ ಪಡಿಸಬೇಕು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಹೊಸ ಕಾಮಗಾರಿ ಕೈಗೆತ್ತಿಕೊಂಡರೆ ಜೀವ ವೈವಿಧ್ಯ, ಪರಿಸರ ಮತ್ತು ಕಂದಾಯ ಕಾಯ್ದೆಗಳ ಉಲ್ಲಂಘನೆಯೂ ಆಗುತ್ತದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಯೋಚಿಸಬೇಕು. ರಾಜ್ಯ ಅರಣ್ಯ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಜ್ಞರ ಸಲಹೆಗೆ ಮಾನ್ಯತೆ ನೀಡಬೇಕು. ಪ್ರಸ್ತಾವನೆ ಬದಲಾಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.
ವೃಕ್ಷಲಕ್ಷ ಆಂದೋಲನದ ದಿನೇಶ್, ಸತ್ಯನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net