

ಶಿವಮೊಗ್ಗ: ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನದಲ್ಲಿ ಶಿವರಾತ್ರಿ ವಿಶೇಷವಾಗಿ ಪರಿಸರ ಕುಂಭ ಆಯೋಜಿಸಲಾಗಿದೆ. ಪ್ರಯಾಗರಾಜ್ ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ಪವಿತ್ರ ತೀರ್ಥದಿಂದ ಶಿವನಿಗೆ ಅಭಿಷೇಕ ನೆರವೇರಲಿದೆ. ಪ್ರಕೃತಿ ಸಂರಕ್ಷಣೆ ಹಾಗೂ ಪರಿಸರ ಜಾಗೃತಿಯನ್ನು ಬೋಧಿಸುವ, ಶಿವಸಂಕಲ್ಪ ಕೈಗೊಳ್ಳುವ ವ್ಯವಸ್ಥೆಯನ್ನು ಫೆ.26ರಂದು ಮಾಡಲಾಗಿದೆ ಎಂದು ಈಶ್ವರವನದ ಸಂಸ್ಥಾಪಕ ನವ್ಯಶ್ರೀ ನಾಗೇಶ್ ತಿಳಿಸಿದರು.
26ರ ಬೆಳಗ್ಗೆ 10ಕ್ಕೆ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ.ಸೋಮೇಶ್ವರ ರಕ್ತದಾನ ಶಿಬಿರ ಉದ್ಘಾಟಿಸಲಿದ್ದಾರೆ. ರೆಡ್‌ಕ್ರಾಸ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ನೇತೃತ್ವದಲ್ಲಿ ರಕ್ತದಾನ ಶಿಬಿರದ ಮೂಲಕ ಶಿವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 6ಕ್ಕೆ ವೇದಿಕೆಯ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ ಅವರಿಂದ ಪ್ರಕೃತಿ ಮತ್ತು ಅಧ್ಯಾತ್ಮ ವಿಷಯ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವ್ಯಶ್ರೀ ಈಶ್ವರವನ ಪರಿಸರ ಪ್ರಶಸ್ತಿಯನ್ನು ಪರೋಪಕಾರಂ ತಂಡಕ್ಕೆ, ಸಾಮಾಜಿಕ ಪ್ರಶಸ್ತಿಯನ್ನು ಮುಷ್ಟಿ ಅಕ್ಕಿ ಯೋಜನೆ ತಂಡಕ್ಕೆ, ವೈಯಕ್ತಿಕ ಸಾಧನೆ ಪ್ರಶಸ್ತಿಯನ್ನು ಪ್ರೊ. ಬಿ.ಎಂ.ಕುಮಾರಸ್ವಾಮಿ ಅವರಿಗೆ ಸಂಜೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಪ್ರದಾನ ಮಾಡಲಿದ್ದಾರೆ. ಭಜನಾ ಪರಿಷತ್‌ನಿಂದ ಭಜನೆ ಹಾಗೂ ಸಪ್ತಸ್ವರದಿಂದ ನಿರಂತರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಪ್ರಮುಖರಾದ ವಿನಯ್, ಗೀತಾ ಪಾಟೀಲ್, ಗಣೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.