ಗ್ರಾಹಕರ ಸೋಗಿನಲ್ಲಿ ಆಭರಣ ಅಂಗಡಿಗೆ ಎಂಟ್ರಿ, ಕೊರಳಿಗೆ ಸರ ಧರಿಸಿ ಪರಾರಿ..!

rohith
Published on

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ತೆರಳಿ ಸರ ಕೊರಳಿಗೆ ಹಾಕಿಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

ಯವಂತಪುರದ ಸುಬೇದಾರ್‌ಪಾಳ್ಯ ನಿವಾಸಿ ರೋಹಿತ್(24) ಬಂಧಿತ. 2.50 ಲಕ್ಷ ರೂ.ಮೌಲ್ಯದ 45 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೃತ್ತಿಪರ ಕಳ್ಳ ರೋಹಿತ್, ವಿರುದ್ಧ ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜೈಲು ಸೇರಿದ್ದ ಆರೋಪಿಯು 5 ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದು ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಆರೋಪಿ, ವಾಹನವನ್ನು ಸ್ಟಾರ್ಟ್ ಮಾಡಿ ನಿಲ್ಲಿಸಿ ಬಳಿಕ ಚಿನ್ನದಂಗಡಿ ಒಳಗೆ ಹೋಗುತ್ತಿದ್ದ. ಚಿನ್ನದ ಸರವನ್ನು ಕೊರಳಿಗೆ ಹಾಕಿಕೊಂಡು ಕ್ಷಣಮಾತ್ರದಲ್ಲಿ ಹೊರಗೆ ಬಂದು ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದ.

ಇದೇ ರೀತಿ ಗೋವಿಂದರಾಜನಗರದಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ತೆರಳಿ 30 ಗ್ರಾಂ ಚಿನ್ನದ ಸರ ತೋರಿಸುವಂತೆ ಕೇಳುತ್ತಿದ್ದ. ಅಂಗಡಿ ಸಿಬ್ಬಂದಿ ವಿವಿಧ ವಿನ್ಯಾಸದ ಸರಗಳನ್ನು ತೋರಿಸಿದಾಗ ಅದರಲ್ಲಿ 1 ಸರವನ್ನು ಕೊರಳಿಗೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ಡ್ರಾಮಾ ಮಾಡುತ್ತಿದ್ದ.

ಸಿಬ್ಬಂದಿ ಗಮನ ಬೇರೆಡೆ ಸೆಳೆದು ಏಕಾಏಕಿ ಅಂಗಡಿಯಿಂದ ಹೊರಗೆ ಓಡಿ ಬಂದು ಚಿನ್ನದ ಸರದೊಂದಿಗೆ ಪರಾರಿಯಾಗುತ್ತಿದ್ದ. ಕದ್ದ ಚಿನ್ನದ ಸರವನ್ನು ಮಾರಾಟ ಮಾಡಿ ಹೆಂಗಸರ ಸಹವಾಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net