

ಕೋಲಾರ: ರಾಜ್ಯ ಸರ್ಕಾರವು ಸೆ.22ರಿಂದ ಅ.7ರವರೆಗೆ 15 ದಿನಗಳ ಕಾಲ ಹೊಸ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ನಡೆಸಲು ನಿರ್ಧರಿಸಿದ್ದು, ಸಮುದಾಯದವರು ಕಡ್ಡಾಯವಾಗಿ ಒಕ್ಕಲಿಗ ಎಂದು ನಮೂದಿಸಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಾಂಗದ ಜಾತಿ ಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ಕುರಿತು ಅರಿವು ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿ, 1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆಯು ಈಗ ನಡೆಯುತ್ತಿರುವುದು ಸ್ವಾಗತಾರ್ಹ ಎಂದರು.
ಒಕ್ಕಲಿಗರ ಜನಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಯಾವುದೇ ಗಣತಿದಾರರು ಬಂದಾಗ, ಉಪ ಪಂಗಡಕ್ಕೆ ಸೇರಿದ್ದರೂ ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕು ಎಂದು ತಿಳಿಸಿದರು.
ಉಪ ಪಂಗಡಗಳನ್ನು ಉಪ ಜಾತಿ ಕಲಂನಲ್ಲಿ ದಾಖಲಿಸಬೇಕು. ಜಾತಿ ಕಲಂನಲ್ಲಿ ಯಾರೂ ಉಪ ಜಾತಿ ನಮೂದಿಸಬಾರದು. ಹಾಗೇಯೇ ನಿಮ್ಮ ಸರಿಯಾದ ವಿದ್ಯಾಬ್ಯಾಸ, ಜಮೀನು, ಆರ್ಥಿಕ ಸ್ಥಿತಿಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಒಟ್ಟು 10 ಜನರಿದ್ದು ಕುಟುಂಬದಲ್ಲಿ 20 ಎಕರೆ ಜಮೀನಿದ್ದರೆ ಕುಟುಂದದ 10 ಮಂದಿಗೆ ತಲಾ ಎರಡು ಎಕರೆ ಜಮೀನು ಬರುತ್ತದೆ. ಅದನ್ನು ಬರೆಸಬೇಕು ಹೊರತು ಕುಟುಂಬದಲ್ಲಿನ 10 ಜನರು ತಲಾ 20 ಎಕರೆ ಜಮೀನು ಎಂದು ಬರೆಸಬಾರದು. ಮುಂದೆ ಸರ್ಕಾರಿ ಸೌಲಭ್ಯ ಸಿಗಬೇಕಿದ್ದರೆ ಸರಿಯಾದ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಒಕ್ಕಲಿಗರು ಹಿಂದೆ ಆಶ್ರಯ ಹಾಗೂ ಅನ್ನದಾತರಾಗಿದ್ದರು. ಆಗ ಎಲ್ಲರೂ ಒಗ್ಗಟ್ಟಾಗಿದ್ದು ಸಮಾಜದ ಏಳಿಗೆಗೆ ದುಡಿಯುತ್ತಿದ್ದರು. ಆದರೆ ಈಗ ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲವಾಗಿದೆ. ನಾವು ಮತ್ತು ನಮ್ಮ ಸಮಾಜ ಉಳಿಯ ಬೇಕಾದರೆ ಒಕ್ಕಲಿಗರು ಒಗ್ಗಟಾಗಿರಬೇಕು. ಸಮುದಾಯಕ್ಕೆ ಧಕ್ಕ ಬೇಕಾದ ಮೀಸಲಾತಿಸಿಗಬೇಕು. ಆಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಈಗ ಆಕಾಲ ಕೂಡಿ ಬಂದಿದೆ ಎಂದು ಎಚ್ಚರಿಸಿದರು.
ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶ್ರೀ ಮಠದ ಶ್ರೀ ಮಂಗಳನಂದನಾಥಸ್ವಾಮೀಜಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಜ್ಯ ಒಕ್ಕಲಿರ ಸಂಘದ ನಿರ್ದೇಶಕರಾದ ಡಾ.ಡಿ.ಕೆ.ರಮೇಶ್, ಕೋನಪ್ಪರೆಡ್ಡಿ, ಎಲುವಲ್ಲಿ ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಖಂಡರಾದ ಸಿಎಂಆರ್ ಶ್ರೀನಾಥ್, ವಿ. ಕೃಷ್ಣಾರೆಡ್ಡಿ ಇದ್ದರು.