

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬ್ಲೂಟೂತ್ ಹಗರಣಗಳನ್ನು ಮಟ್ಟ ಹಾಕಲು ನಿರ್ಧರಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆಗಳಲ್ಲಿ ಅಭ್ಯರ್ಥಿಗಳ ತಪಾಸಣೆಗೆ ಇಎನ್‌ಟಿ ಡಾಕ್ಟರ್‌ಗಳನ್ನು ಕರೆಸಲಿದೆ ಎಚ್ಚರಿಕೆ...
- ಹೌದು, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೆಇಎ, ಬ್ಲೂಟೂತ್ ಹಗರಣಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ಇಎನ್‌ಟಿ ವೈದ್ಯರನ್ನು ನೇಮಿಸಲಿದೆ. ವೈದ್ಯರು ತಪಾಸಣೆ ನಡೆಸಿದ ಬಳಿಕವೇ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಕಲ್ಪಿಸಲಾಗುತ್ತದೆ.
ಆಧುನಿಕ ತಂತ್ರಜ್ಞಾನ ಮುಂದುವರಿದ ನಂತರ ಅಭ್ಯರ್ಥಿಗಳು ಕೂಡ ಅಕ್ರಮಗಳನ್ನು ನಡೆಸಲು ಸ್ಮಾರ್ಟ್ ದಾರಿಗಳನ್ನು ಹುಡುಕಿಕೊಂಡಿದ್ದಾರೆ. ಇವುಗಳನ್ನು ತಡೆಗಟ್ಟಲು ಕೆಇಎ ಕೂಡ ಹಲವಾರು ಪ್ರಯತ್ನಗಳನ್ನು ಸಂಶೋಧಿಸಿದೆ ಎಂದು ‘ವಿಜಯವಾಣಿ ’ಕಚೇರಿಯಲ್ಲಿ ನಡೆದ ೆನ್ ಇನ್‌ನಲ್ಲಿ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಪ್ರತಿ ಕೊಠಡಿಗೆ ಜಾಮರ್ ಅಳವಡಿಕೆ
ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ೆನ್‌ಗಳ ನೆಟ್‌ವರ್ಕ್‌ಗಳನ್ನು ಕಡಿತಗೊಳಿಸುವುದಕ್ಕಾಗಿ ಪ್ರತಿ ಕೊಠಡಿಗೆ ಜಾಮರ್ ಅಳವಡಿಸಲಾಗುತ್ತಿದೆ. ಜಾಮರ್ ಅಳವಡಿಸಲು ಪ್ರತಿ ವಿದ್ಯಾರ್ಥೀಗೆ 23 ರೂ. ವೆಚ್ಚವಾಗಲಿದೆ. ಆದರೂ ಪರೀಕ್ಷೆಯ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಮತ್ತು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಪ್ರಸನ್ನ.
ಪ್ರಶ್ನೆಪತ್ರಿಕೆ ಬಂಡಲ್ ರಕ್ಷಣೆಗೆ 14 ಪದರ ಸೂತ್ರ‘ದಾರ’
ಪಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಗಟ್ಟಲು ಮತ್ತು ಬಂಡಲ್ ಅನ್ನು ಬಿಚ್ಚಿ ಮತ್ತೆ ಕಟ್ಟಲು ಸಾಧ್ಯವಾಗದಂತೆ 14 ಪದರಗಳುಳ್ಳ ದಾರವನ್ನು ಬಳಸಲಾಗುತ್ತಿದೆ. ಒಂದು ಬಾರಿ ಈ ದಾರವನ್ನು ಕತ್ತರಿಸಿದರೆ, ಮತ್ತೆ ಅದನ್ನು ಸೇರಿಸುವುದು ಕಷ್ಟ. ಹಿಂದೆಲ್ಲಾ ಇಸಿ ಪೆಟ್ಟಿಗೆ ಕಾಯಿಸಿ ಪ್ಲಾಸ್ಟಿಕ್ ಅನ್ನು ಅಂಟಿಸುತ್ತಿದ್ದರು. ಅದರ ಜತೆಗೆ ಒಳಗೊಂದು ಪೆಟ್ಟಿಗೆ ನೀಡಲಾಗಿದ್ದು, ಲಾಕ್ ಮಾಡಿರುವುದನ್ನು ಕತ್ತರಿಸಿಯೇ ತೆಗೆಯಬೇಕು. ಮತ್ತೆ ಅದನ್ನು ಸೇರಿಸಲು ಸಾಧ್ಯವಿಲ್ಲ.
ತಮ್ಮದೇ ಸ್‌ಟಾವೇರ್‌ಗೆ ಎನ್‌ಐಸಿ ಜತೆ ಮಾತುಕತೆ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದಲೇ ರಾಷ್ಟ್ರೀಯ ಮಾಹಿತಿ ಆಯೋಗ (ಎನ್‌ಐಸಿ) ಜತೆಗೂ ಮಾತುಕತೆ ನಡೆಸಲಾಗುತ್ತಿದೆ. ತಮ್ಮದೇ ಸ್‌ಟಾವೇರ್ ಅನ್ನು ಹೊಂದಿದ್ದರೆ, ಸ್ಮಾರ್ಟ್ ಹಗರಣಗಳನ್ನು ಕೂಡ ಬಾರದಂತೆ ಎಚ್ಚರ ವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.
ವೆಬ್‌ಸೈಟ್‌ನಲ್ಲಿ ಕೀ ಒಎಂಆರ್ ಪ್ರಕಟ
ಪರೀಕ್ಷೆ ನಡೆಸಿದ ಒಂದೆರಡು ದಿನಗಳಲ್ಲಿಯೇ ಅಭ್ಯರ್ಥಿಗಳ ಒಎಂಆರ್ ಶೀಟ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಇದರಿಂದ ಯಾವ ವಿದ್ಯಾರ್ಥಿಗಳು ಎಷ್ಟು ಉತ್ತರಗಳನ್ನು ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ. ಅಕ್ರಮ ನಡೆಯುತ್ತಿದೆ ಎಂಬ ಅನುಮಾನಗಳಿಗೂ ಕೊನೆ ಹಾಡಿದಂತಾಗಲಿದೆ. ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.
ಮಧ್ಯವರ್ತಿಗಳನ್ನು ನಂಬಬೇಡಿ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬರು 40 ಲಕ್ಷಕ್ಕೆ ಡೀಲ್‌ಗೆ ಮಾತನಾಡಿದ್ದರಂತೆ, ಪರೀಕ್ಷೆಗೆ ಹಾಜರಾಗಿ ಒಎಂಆರ್ ಖಾಲಿ ಬಿಡುವಂತೆ ಸಲಹೆ ನೀಡಿದ್ದರಂತೆ. ಆದರೆ, ಇಂತಹ ಅಕ್ರಮಗಳು ಮಧ್ಯವರ್ತಿಗಳಿಂದ ನಡೆಯುತ್ತಿದೆಯೇ ವಿನಃ ಕೆಇಎ ನಡೆಸುತ್ತಿರುವುದಿಲ್ಲ. ಅಭ್ಯರ್ಥಿಗಳ ಮನಸ್ಸಿನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಅನುಮಾನಗಳು ಸುಳಿಯಬಾರದು ಎಂಬ ದೃಷ್ಟಿಯಿಂದ ತಾಂತ್ರಿಕವಾಗಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಮತ್ತು ಪಾಲಕರು ಮಧ್ಯವರ್ತಿಗಳನ್ನು ನಂಬಿ ವಂಚನೆಗೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.