

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ಲಾಕ್ಡೌನ್ ಮೇ 3ರವರೆಗೆ ವಿಸ್ತರಣೆಯಾಗುತ್ತದೆ ಎಂದು ಘೋಷಿಸಿದ್ದಾರೆ.
ಈ 21 ದಿನಗಳ ಲಾಕ್ಡೌನ್ನಲ್ಲಿಯೇ ಅದೆಷ್ಟೋ ಜನರು ಹೊಟ್ಟೆಗಿಲ್ಲದೆ ಕಷ್ಟಪಡುತ್ತಿದ್ದಾರೆ. ಇನ್ನೂ ಮೇ 3ರವರೆಗೆ ಹೇಗೆ ಎಂಬ ಚಿಂತೆ ಸಹಜವಾಗಿ ಜನರಲ್ಲಿ ಮೂಡಿದೆ.
ಈಗ ಗೃಹಸಚಿವ ಅಮಿತ್ ಷಾ ಅವರು ಟ್ವೀಟ್ ಮೂಲಕ ಜನರಿಗೆ ಅಭಯ ನೀಡಿದ್ದು, ಯಾರೂ ಆತಂಕ ಪಡುವುದು ಬೇಡ. ದಿನಸಿ, ಔಷಧ ಸೇರಿ ಅಗತ್ಯ ವಸ್ತುಗಳ ಪೂರೈಕೆ ನಿಲ್ಲುವುದಿಲ್ಲ. ಸಾಕಷ್ಟು ದಾಸ್ತಾನಿದೆ ಎಂದಿದ್ದಾರೆ.
ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಅಮಿತ್ ಷಾ, ಜನರು ಆಹಾರ, ಅಗತ್ಯ ವಸ್ತುಗಳು ಸಿಗದೆ ಕಷ್ಟಪಡುತ್ತಿದ್ದಾರಾ? ಎಂದು ಸೂಕ್ತ ಪರಿಶೀಲನೆ ನಡೆಸಿ ಎಂದೂ ಹೇಳಿದ್ದಾರೆ.
ಹಾಗೇ ಬಡಜನರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಇದು ಕಷ್ಟದ ಸಂದರ್ಭವಾಗಿದ್ದು, ಹಣವಂತರು, ಧನಿಕರು ಬಡಬಗ್ಗರಿಗೆ ಸಹಾಯ ಹಸ್ತ ಚಾಚಿ ಎಂದಿದ್ದಾರೆ. ಬಡವರಿಗೆ ಸಹಾಯ ಮಾಡಲು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಹಾಗೇ ಕರೊನಾ ವಿರುದ್ಧ ಹೋರಾಟದಲ್ಲಿ ಕೇಂದ್ರದೊಂದಿಗೆ ಒಗ್ಗಟ್ಟಾಗಿ ನಿಂತಿರುವ ಎಲ್ಲ ರಾಜ್ಯಸರ್ಕಾರಗಳನ್ನೂ ಅಮಿತ್ ಷಾ ಹೊಗಳಿದ್ದಾರೆ. ಈ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಭದ್ರತಾ ಪಡೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್ 10,000ದ ಗಡಿ ದಾಟಿದ್ದು, 339 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲದ ಕಾರಣ ಲಾಕ್ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. (ಏಜೆನ್ಸೀಸ್)