

ರಿಪ್ಪನ್‌ಪೇಟೆ: ಜೈನ ಪರಂಪರೆಯಲ್ಲಿ ಶ್ರುತ ಪಂಚಮಿ ಪರ್ವವು ಜೈನ ಧರ್ಮದ ಆಗಮ ಗ್ರಂಥಗಳ ಮಹತ್ವವನ್ನು ಸಾರುತ್ತದೆ ಎಂದು ಹೊಂಬುಜ ಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನಮಠದಲ್ಲಿ ಮಂಗಳವಾರ ಶ್ರುತ ಪಂಚಮಿ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಶ್ರುತ ಎಂದರೆ ಕಿವಿಯಿಂದ ಕೇಳಿದ ದಿವ್ಯಧ್ವನಿಯ ಉಪದೇಶಗಳು. ಇವು ಕೃತಿ ರೂಪದಲ್ಲಿ ಧರ್ಮ ಆಚರಣೆಯ ದಾರಿದೀಪವಾಗಿ ಇಂದು ಧಾರ್ಮಿಕ ಮನೋಧರ್ಮ ಬೆಳೆಸಿಕೊಳ್ಳಲು ಪೂರಕವಾಗಿವೆ ಎಂದರು.
ಲಿಪಿ ರೂಪದಲ್ಲಿ ಜೈನ ಧರ್ಮದ ಗ್ರಂಥಗಳು ಧವಳ, ಜಯಧವಳ, ಮಹಾಧವಳ ಅಪೂರ್ವ ಗ್ರಂಥಗಳಾಗಿವೆ. ಸಾಹಿತ್ಯ, ಭೂಗೋಳ, ಖಗೋಳ, ಜ್ಯೋತಿಷ್ಯ, ವಿಜ್ಞಾನ, ಗಣಿತ, ಚಿತ್ರಕಲೆ, ವೈದ್ಯ ವಿಜ್ಞಾನಗಳನ್ನು ಜ್ಞಾನಾಸಕ್ತರಿಗೆ ಪ್ರಕಟಿಸಲ್ಪಟ್ಟಿದೆ. ಜ್ಯೇಷ್ಠ ಶುಕ್ಲ ಪಂಚಮಿಯಂದು ಲಿಪಿಬದ್ಧ ಜೈನಧರ್ಮ ಗ್ರಂಥಗಳು ಲೋಕಾರ್ಪಣೆಗೊಂಡ ಸ್ಮರಣೆಗಾಗಿ ಜಿನವಾಣಿ ಶ್ರೀ ಸರಸ್ವತಿ ದೇವಿ ಆರಾಧನೆ, ಶ್ರುತಸ್ಕಂದ ಪೂಜೆ ನೆರವೇರಿಸುವ ಪೂರ್ವ ಪರಂಪರೆಯ ಐತಿಹ್ಯವನ್ನು ಶ್ರೀಗಳು ವಿವರಿಸಿದರು. ಎಲ್ಲರೂ ಸ್ವಾಧ್ಯಾಯ ಮಾಡುವುದರಿಂದ ಜ್ಞಾನ ಸಂಪತ್ತನ್ನು ವೃದ್ಧಿಸಿಕೊಂಡು ಜೀವನ ಮೌಲ್ಯಗಳನ್ನು ಧರ್ಮಪ್ರಜ್ಞೆಯಿಂದ ಸಂವರ್ಧಿಸಬೇಕು ಎಂದು ಆಶಿಸಿದರು.
ಧರಸೇನ ಆಚಾರ್ಯರು ಭೂತಬಲಿ ಮತ್ತು ಪುಷ್ಪದಂತ ಮುನಿಶ್ರೀಗಳು ಶಿಷ್ಯರಿಗೆ ಜ್ಞಾನಾವೃತವನ್ನು ಧಾರೆಯೆರೆದರು. ಹೀಗೆ ದ್ವಾದಶಾಂಗ ಧರ್ಮಗ್ರಂಥ ರಚನೆಯಾಯಿತು. ಆ ಸುದಿನವೇ ಜ್ಯೇಷ್ಠ ಶುಕ್ಲ ಪಂಚಮಿ ಆಗಿದ್ದರಿಂದ ಇಂದಿಗೂ ಶ್ರುತಪಂಚಮಿ ಪರ್ವ ಆಚರಣೆಯಲ್ಲಿದೆ ಎಂದು ತಿಳಿಸಿದರು.
ಅತಿಶಯ ಶ್ರೀ ಕ್ಷೇತ್ರದಲ್ಲಿ ಸರಸ್ವತಿ ದೇವಿ ಆರಾಧನೆ, ಜಿನವಾಣಿ, ಶ್ರುತಸ್ಕಂದ ಪೂಜೆ, ಧವಳತ್ರಯ ಗ್ರಂಥಗಳ ಪಲ್ಲಕ್ಕಿ ಉತ್ಸವ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ವಿಶೇಷ ಅಲಂಕಾರ ಮಹಾಪೂಜೆಗಳು ಆರ್ಯಿಕಾ ಶ್ರೀ ಶಿವಮತಿ ಮಾತಾಜಿ ಅವರ ಹಾಗೂ ಸ್ವಸ್ತಿಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿತು.