

ಶಿವಮೊಗ್ಗ: ಇಂಗ್ಲೀಷ್ ಕೇವಲ ಬೋಧನೆಯ ಪಠ್ಯವಾಗಬಾರದು. ಅದು ಜನಲೋಕವನ್ನು ಒಳಗೊಳ್ಳಬೇಕು. ಇಂಗ್ಲೀಷ್ ಇಂದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಇಂಗ್ಲೀಷ್ ಪಠ್ಯ ಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯದ ಹಲವು ವಿಷಯಗಳನ್ನು ವಿಸ್ತಾರವಾಗಿ ತಿಳಿದುಕೊಳ್ಳಲು ಇಂಗ್ಲಿಷ್ ಅನಿವಾರ್ಯ. ಸರಳವಾದ ಇಂಗ್ಲಿಷ್‌ನಲ್ಲಿ ಚಾರ್ಲ್ಸ್ ಡಾರ್ವಿನ್ ಬರೆದ ಜೀವಗಳ ವಿಕಾಸವಾದ ಪುಸ್ತಕ ಇಡೀ ಜಗತ್ತಿನ ಗಮನ ಸೆಳೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು ಎಂದು ಹೇಳಿದರು.
ಜ್ಞಾನವನ್ನು ಬೇರೆ ಬೇರೆ ನೆಲೆಗಳಿಂದ ತಂದು ಪಠ್ಯಗಳನ್ನು ಕಟ್ಟಬೇಕಾಗಿದೆ. ಅದನ್ನು ಬಿಟ್ಟು ಕೇವಲ ಮಾರುಕಟ್ಟೆಯ ಅಗತ್ಯಗಳಿಗೆ ಬೇಕಾಗಿರುವ ಕೆಲವು ಕೌಶಲಗಳನ್ನು ಪಠ್ಯಗಳು ಒಳಗೊಂಡರೆ ಅದು ದೊಡ್ಡ ಅಪಚಾರವಾಗುತ್ತದೆ. ಇಂದು ವಿವಿಧ ಜ್ಞಾನ ಪಠ್ಯಗಳನ್ನು ಒಂದಾಗಿ ಕೂಡಿಸಿ ಅಂತರ್ ಪಠ್ಯಗಳನ್ನು ಕಟ್ಟಬೇಕಾಗಿದೆ ಎಂದು ತಿಳಿಸಿದರು.
ಪಶ್ಚಿಮದ ಕ್ಯಾನನ್‌ಗಳನ್ನು ಮುರಿದು ಜಗತ್ತಿನ ವಿವಿಧ ಸಂವೇದನೆಗಳನ್ನು ಬೆಸೆಯಬೇಕು. ಇಂಗ್ಲಿಷನ್ನು ಹೆಚ್ಚು ಪ್ರಜಾಪ್ರಭುತ್ವಗೊಳಿಸಬೇಕು. ಈ ನಿಟ್ಟಿನಲ್ಲಿ ಪುಠ್ಯಪುಸ್ತಕಗಳು ಬಹಳ ಮುಖ್ಯವಾಗುತ್ತವೆ. ಇಂಗ್ಲಿಷ್‌ನ್ನು ಸ್ವಾಗತದ ಭಾಷೆಯಾಗಿಯೇ ಕಲಿಯಬೇಕು. ನಮ್ಮತನದ ಕನ್ನಡ ಇದ್ದೇ ಇರುತ್ತದೆ. ಆದರೆ ಜ್ಞಾನದ ವಿಸ್ತರಣೆ ಇಂಗ್ಲಿಷ್‌ನಿಂದ ಹೆಚ್ಚುತ್ತದೆ ಎಂದರು.
ಪ್ರಾಚಾರ್ಯ ಪ್ರೊ.ಟಿ.ಅವಿನಾಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಶ್ರೀಧರ್, ತುಮಕೂರು ವಿವಿ ಪ್ರಾಧ್ಯಾಪಕ ಡಾ.ಶಿವಲಿಂಗಮೂರ್ತಿ, ಇಂಗ್ಲೀಷ್ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ಡಾ.ಸಿ.ಚನ್ನಪ್ಪ, ಐಕ್ಯುಎಸಿ ಸಂಯೋಜಕಿ ಡಾ.ಕೆ.ಎಸ್.ಸರಳಾ, ಪ್ರಾಧ್ಯಾಪಕರಾದ ಡಾ.ಮೇಟಿ ಮಲ್ಲಿಕಾರ್ಜುನ, ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಂ. ಪರಶುರಾಮ್ ಮುಂತಾದವರಿದ್ದರು.