ಇಂಜಿನಿಯರಿಂಗ್: ಜಗತ್ತನ್ನು ಆಳುತ್ತಿರುವ ಎಐಗೆ ಮೊದಲ ಆದ್ಯತೆ

Cyber Attack
Published on

ಇಂದು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ಅವರ ಹುಟ್ಟುಹಬ್ಬವನ್ನು ಇಂಜಿನಿಯರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಏನೆಲ್ಲ ಬದಲಾವಣೆಯಾಗುತ್ತಿದೆ. ಯಾವ ಕೊರ್ಸ್‌ಗೆ ಹೆಚ್ಚು ಬೇಡಿಕೆ ಇದೆ, ಯಾವುದು ಕುಸಿತವಾಗಿದೆ ಎಂಬ ಸಮಗ್ರ ಸುದ್ದಿ ಇಲ್ಲಿದೆ.

ಎನ್.ಎಲ್. ಶಿವಮಾದು

ಬೆಂಗಳೂರು: ಕಂಪ್ಯೂಟರ್ ಆಧಾರಿತ ತಂತ್ರಜ್ಞಾನವೇ ಶರವೇಗದಲ್ಲಿ ಬದಲಾಗಲಾಗುತ್ತಿರುವ ಪರೀಣಾಮ, ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿಯೂ ಸಾರ್ವಕಾಲಿಕ ಮತ್ತು ಸಾಂಪ್ರದಾಯಿಕ ಕೋರ್ಸ್‌ಗಳಾದ ಸಿವಿಲ್, ಮೆಕಾನಿಕಲ್‌ಗಳನ್ನು ಹಿಂದಿಕ್ಕಿ ಕಂಪ್ಯೂಟರ್ ಸೈನ್ಸ್ ಜಗತ್ತನ್ನೇ ಆಳುತ್ತಿದೆ.

ಕೊರೊನಾ ನಂತರದ ವರ್ಷಗಳಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪ್ರತಿ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿರುವ ಕಾರಣ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಐ ಬಿಟ್ಟು ಬೇರೇನೂ ಕಾಣುತ್ತಿಲ್ಲ. ಏಕೆಂದರೆ, ಪ್ರತಿ ಕ್ಷೇತ್ರದಲ್ಲಿ ಎಐ ಕೆಲಸ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಮಷಿನ್ ಲರ್ನಿಂಗ್, ಡೇಟಾ ಸೈನ್ಸ್ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನೇ ವಿದ್ಯಾರ್ಥಿಗಳು ಕೂಡ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

220 ಕಾಲೇಜು , 1.10 ಲಕ್ಷ ಸೀಟು:

ರಾಜ್ಯದಲ್ಲಿ 17 ಸರ್ಕಾರಿ ಸೇರಿ ಒಟ್ಟು 220 ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಇಟಿ ಮತ್ತು ಖಾಸಗಿ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷೆಗಳ ಮೂಲಕ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

2025-26ನೇ ಸಾಲಿನಲ್ಲಿ 84,143 ಸಿಇಟಿ ಸೀಟು ಮತ್ತು 28,178 ಕಾಮೆಡ್-ಕೆ ಸೀಟುಗಳು ಸೇರಿ ಒಟ್ಟು 1.10 ಲಕ್ಷ ಸೀಟುಗಳು ಲಭ್ಯವಾಗಿದ್ದವು. ಈ ಬಾರಿ ದಾಖಲೆ ಮಟ್ಟದಲ್ಲಿ 70 ಸಾವಿರಕ್ಕೂ ಹೆಚ್ಚಿನ ಸೀಟುಗಳು ಭರ್ತಿಯಾಗಿವೆ. ಸಿಇಟಿ 3ನೇ ಸುತ್ತಿನ ಸೀಟು ಹಂಚಿಕೆ ಲಿತಾಂಶದ ಬಳಿಕ ಉಳಿದುಕೊಂಡಿರುವ 14,940 ಇಂಜಿನಿಯರಿಂಗ್ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಕೆಇಎ ವಾಪಸ್ ನೀಡಿದೆ.

ಹಾಗೆಯೇ ಕಾಮೆಡ್-ಕೆನಲ್ಲಿ 28,178 ಸೀಟುಗಳಲ್ಲಿ 18,578 ಸೀಟುಗಳು ಭರ್ತಿಯಾಗಿದೆ ಉಳಿದಿವೆ. ದೇಶಾದ್ಯಂತ 150ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್-ಕೆ ವತಿಯಿಂದ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ.

ವರ್ಷದಿಂದ ವರ್ಷಕ್ಕೆ ಹೆಚ್ಚು ಬೇಡಿಕೆ

ಈ ಮೊದಲು ಸಿವಿಲ್ ಮತ್ತು ಮೆಕಾನಿಕಲ್ ಕೋರ್ಸ್‌ಗಳಿಗೆ ಬೇಡಿಕೆ ಇದ್ದ ಸಮಯದಲ್ಲಿ ಶೇ.50ರಷ್ಟು ಸೀಟುಗಳು ಭರ್ತಿಯಾಗದೆ ಉಳಿಯುತ್ತಿದ್ದವು. ಆದರೆ, ಕಂಪ್ಯೂಟರ್ ಸೈನ್ಸ್‌ಗೆ ಆದ್ಯತೆ ನೀಡಿದ ನಂತರ ಸೀಟುಗಳ ಭರ್ತಿಯೂ ಜಾಸ್ತಿಯಾಗುತ್ತಿದೆ, ಕಡಿಮೆ ಸಂಖ್ಯೆಯ ಸೀಟುಗಳು ಮಾತ್ರ ಬಾಕಿ ಉಳಿಯುತ್ತಿವೆ.

ಸುಮಾರು 2021ರವರೆಗೂ ಸಾಮಾನ್ಯವಾಗಿ 60 ಸಾವಿರ ಸೀಟುಗಳ ಲಭ್ಯವಾಗುತ್ತಿದ್ದವು. ಇದರಲ್ಲಿ ಸಮುಆರು 35 ಸಾವಿರ ಸೀಟುಗಳು ಭರ್ತಿಯಾಗಿದ್ದು, 25 ಸಾವಿರ ಸೀಟು ಉಳಿದಿದ್ದವು. 2022ರ ನಂತರ ಬಾಕಿ ಉಳಿಯುವ ಸಂಖ್ಯೆ ಕಡಿಮೆಯಾಗುತ್ತಿದೆ.

2024ರಲ್ಲಿ 70ಸಾವಿರ ಸೀಟುಗಳಲ್ಲಿ 15 ಸಾವಿರ ಸೀಟುಗಳು ಉಳಿದಿದ್ವವು. ಈ ಬಾರಿ 84 ಸಾವಿರ ಸೀಟುಗಳಲ್ಲಿ 14 ಸಾವಿರ ಸೀಟುಗಳು ಉಳಿದಿವೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಸೀಟುಗಳು ಉಳಿಯುವ ಪ್ರಮಾಣ ಇಳಿಮುಖವಾಗುತ್ತಿದೆ.

ಕಂಪ್ಯೂಟರ್ ಸೈನ್ಸ್ ಮೊದಲ ಆದ್ಯತೆ ಏಕೆ?

ಸಾಂಪ್ರದಾಯಿಕವಾಗಿ ಇಂಜಿನಿಯರಿಂಗ್ ಎಂದಾಕ್ಷಣ ಸಿವಿಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗಳ ಬೇಡಿಕೆ ಇದ್ದೇ ಇದೆ. ಆದರೆ, ಕೆಲವು ಕಾಲೇಜುಗಳಲ್ಲಿ ಮಾತ್ರ ಪ್ಲೇಸ್‌ಮೆಂಟ್ ಭರ್ತಿಯಾಗುವ ಕಾಲೇಜುಗಳನ್ನು ಹೊರತುಪಡಿಸಿದರೆ ಬೇರೆಲ್ಲೂ ಸಿವಿಲ್ ಮತ್ತು ಮೆಕಾನಿಕಲ್ ಬ್ಲಾಕ್‌ಗಳನ್ನು ಮುಚ್ಚಲಾಗಿದೆ.

ಆದರೆ, ವೃತ್ತಿಪರ ಕೋರ್ಸ್‌ಗಳಲ್ಲಿ ಕಂಪ್ಯೂಟರ್ ಸೈನ್ಸ್ ಎಲ್ಲರ ಅಚ್ಚುಮೆಚ್ಚಾಗಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಕೋರ್ಸ್‌ಗಳಲ್ಲಿ ಪ್ಲೇಸ್‌ಮೆಂಟ್ ಹಾಗೂ ಉದ್ಯಮಶೀಲತೆ ಹೆಚ್ಚುತ್ತಿರುವ ಕಾರಣ ನಾಗಾಲೊಟದಲ್ಲಿ ಸೀಟು ಭರ್ತಿಯಾಗುತ್ತಿವೆ. ಕಾಲೇಜುಗಳು ಕೂಡ ಈ ಕೋರ್ಸ್‌ಗಳಿಗೆ ಜಾಸ್ತಿ ಆದ್ಯತೆ ನೀಡುತ್ತಿವೆ.

ಸಿಎಸ್ ಕಡೆ ವಾಲುತ್ತಿರುವ ತಾಂತ್ರಿಕ ಸಂಸ್ಥೆಗಳು

ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬೇಡಿಕೆ ಕುಸಿತವಾಗಿರುವ ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್ಸ್, ಕೆಮಿಕಲ್, ಏರೋಸ್ಪೇಸ್ ಸೇರಿ ಹಲವು ಕೋರ್ಸ್‌ಗಳ ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಬದಲಾಗಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳ ಸಂಖ್ಯೆಯನ್ನೇ ಹೆಚ್ಚಳ ಮಾಡಿಕೊಳ್ಳುವ ಮೂಲಕ ಸಂಸ್ಥೆಗಳು ಕೂಡ ಬೇಡಿಕೆ ಇರುವ ಕೋರ್ಸ್‌ಗಳನ್ನೇ ಬೋಧಿಸುತ್ತಿವೆ ಎನ್ನುತ್ತಾರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿದ್ಯಾಶಂಕರ್.

ಕನ್ನಡ ಮಾಧ್ಯಮ ಸೀಟು ಕೇಳೋರಿಲ್ಲ:

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ 2021ರಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಪ್ರಾಯೋಗಿಕವಾಗಿ ರಾಜ್ಯದ 4 ಕಾಲೇಜುಗಳಲ್ಲಿ ಆರಂಭಿಸಲಾಯಿತು. ಆದರೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಉದ್ಯೋಗ ಸಿಗುವುದಿಲ್ಲ ಎಂಬ ಕಾರಣದಿಂದ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಕ ಎಂದು ಚಿಕ್ಕಬಳ್ಳಾಪುರ ಕಾಲೇಜಿನ ಉಪನ್ಯಾಸಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಶೇ.15ರಿಂದ 20 ಮಂದಿಗಷ್ಟೇ ಕೆಲಸ

ಒಂದೆಡೆ ಇಂಜಿನಿಯರಿಂಗ್ ಕೋರ್ಸ್‌ಗೆ ಮುಗಿಬೀಳುತ್ತಿದ್ದರೂ ವಾರ್ಷಿಕ ಶೇ.15ರಿಮದ 20 ಇಂಜಿನಿಯರಿಂಗ್ ಪದವೀಧರರಿಗಷ್ಟೇ ಉದ್ಯೋಗ ಸಿಗುತ್ತಿದೆ. ಉಳಿದವರು ಕೆಲಸ ಅಷ್ಟಕಷ್ಟೆಯಾಗಿದೆ. ಕೆಲವು ಸ್ವಯಂ ಉದ್ಯೋಗ ಸೃಷ್ಟಿಸಿದರೆ, ಹಲವರು ಸ್ಪರ್ಧಾತ್ಮಕ ಪರೀಕ್ಷೆ ಸೇರಿ ಹಲವು ಕ್ಷೇತ್ರಗಳಿಗೆ ವಲಸೆ ಹೋಗುತ್ತಿದ್ದಾರೆ.

ಪದವಿ ಜತೆಗೆ ಕೌಶಲ ಬಹಳ ಮುಖ್ಯ

ಕೇವಲ ಇಂಜಿನಿಯರಿಂಗ್ ಪದವಿ ಮಾಡಿದರಷ್ಟೇ ಸಾಲದು. ಅದರ ಜತೆಗೆ, ನಾಯಕತ್ವ, ಭಾಷಾ ಜ್ಞಾನ, ಸಮಸ್ಯೆಗಳನ್ನು ಬಗೆಹರಿಸುವ ಚಾಕಚಕ್ಯತೆ, ನಿರ್ವಹಣೆ ಮಾಡುವಂತಹ ಕೌಶಲ ಗುಣಗಳನ್ನು ಕಂಪನಿಗಳು ಬಯಸುತ್ತಿವೆ. ತರಗತಿಯಲ್ಲಿ ನೀವೆಷ್ಟೇ ಜಾಣರಿದ್ದರೂ ಮತ್ತು ಅಂಕಗಳಲ್ಲಿ ಸಿಜಿಪಿಎ ಸ್ಕೋರ್ ಉತ್ತಮವಾಗಿದ್ದರೂ ಜೀವನ ಮತ್ತು ಉದ್ಯೋಗದಲ್ಲಿ ಕೌಶಲ ಬಹಳ ಮುಖ್ಯ ಎನ್ನುತ್ತಾರೆ ವಿವಿಧ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net