

ಚೆನ್ನೈ: ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ(Sexually Assault) ಎಸಗಿದ್ದಾರೆ. ಡಿಸೆಂಬರ್ 23 ರಂದು ಸಂಜೆ ಘಟನೆ ನಡೆದಿದ್ದು ಬುಧವಾರ (ಡಿಸೆಂಬರ್ 24) ಪೊಲೀಸರಿಗೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿಯು ಕ್ಯಾಂಪಸ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ತೆರೆದ ಪ್ರದೇಶದಲ್ಲಿ ಕುಳಿತಿದ್ದಳು. ಅಲ್ಲಿಗೆ ಬಂದ ಅಪರಿಚಿತ ಇಬ್ಬರು ಪುರುಷರು ಆಕೆಯ ಸ್ನೇಹಿತನನ್ನು ಥಳಿಸಿ ನಂತರ ಆಕೆಯನ್ನು ಪೊದೆಯೊಳಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ನಗರದ ಹೃದಯ ಭಾಗದಲ್ಲಿರುವ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ದಾಳಿಕೋರರು ವಿದ್ಯಾರ್ಥಿಗಳೇ ಅಥವಾ ಹೊರಗಿನವರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಕ್ಯಾಂಪಸ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮಿಳುನಾಡು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ಗೆ ಸಾಧ್ಯವಾಗಲಿಲ್ಲ ಎಂದು ಅವರು ಟೀಕಿಸಿದರು. ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪೊಲೀಸರನ್ನು ಬಳಸುತ್ತಿರುವುದರಿಂದ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿದ್ದಾರೆ.
ಕೊಲ್ಕತಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟ್ರೈನಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ಕ್ಯಾಂಪಸ್‌ನಲ್ಲಿ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. 22 ವರ್ಷದ ಮಹಿಳೆ ತನ್ನ ಸ್ನೇಹಿತನನ್ನು ಭೇಟಿಯಾಗಲು ತನ್ನ ಹಾಸ್ಟೆಲ್‌ನಿಂದ ಹೊರಬಂದಾಗ ಮೂವರು ಪುರುಷರು ಆಕೆಯನ್ನು ದಾರಿತಪ್ಪಿಸಿ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)