

ಬೆಂಗಳೂರು: ಖಾಸಗಿ ಆಂಗ್ಲ ಸುದ್ದಿ ವಾಹಿನಿಯ ನಿರೂಪಕಿಯ ಹೆಸರಿನಲ್ಲಿ ಇಂಜಿನಿಯರ್‌ವೊಬ್ಬರಿಗೆ ಬಿಟ್‌ಕಾಯಿನ್‌ನಲ್ಲಿ ಹಣ ಹೂಡಿದರೆ ಕಡಿಮೆ ಸಮಯದಲ್ಲಿ ಕೋಟ್ಯಂತರ ರೂ. ಸಂಪಾದಿಸಬಹುದು ಎಂದು ನಂಬಿಸಿ ೯೫.೨೫ ಲಕ್ಷ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಶಾಂತಲಾನಗರ ನಿವಾಸಿ ಕಾರ್ತಿಕ್ ಮನಯ್(೫೩) ಎಂಬುವರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಖಾಸಗಿ ಸುದ್ದಿ ವಾಹಿನಿಯ ನಿರೂಪಕಿ ಸೋನಿಯಾ ಶೆಣೈ, ರಾಯನ್ ಮತ್ತು ಇಸ್ರೇಲ್ ಇಮ್ಯಾನ್ಯುಯಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ವಾಹಿನಿ ನಿರೂಪಕಿ ಸೋನಿಯಾ ಶೆಣೈ ಹೆಸರಿನಲ್ಲಿ ಟೆಲಿಗ್ರಾಂ ಖಾತೆ ತೆರೆದಿರುವ ಕಿಡಿಗೇಡಿಗಳು, ೨೦೨೨ರ ಜೂನ್‌ನಲ್ಲಿ ತನಗೆ ೧೫ ವರ್ಷಗಳ ಅನುಭವ ಹೊಂದಿದ್ದು, ನಾನು ವಿವಿಧ ಹೂಡಿಕೆಗಳು ಮತ್ತು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ದೂರುದಾರರಿಗೆ ಲಿಂಕ್‌ವೊಂದನ್ನು ಕಳುಹಿಸಿದ್ದಾರೆ.ಬಳಿಕ ಚಾಟಿಂಗ್‌ನಲ್ಲೇ ಬಿಟ್‌ಕಾಯಿನ್‌ಗಳ ಬಗ್ಗೆ ವಿವರಿಸಿ ಅಧಿಕ ಲಾಭ ಬರುತ್ತದೆ ಎಂದು ತಿಳಿಸಿದ್ದು, ಒಂದು ಲಿಂಕ್ ಕೂಡ ಕಳುಹಿಸಿದ್ದರು. ಈ ಲಿಂಕ್ ಮೂಲಕ ೨೦ ಲಕ್ಷ ರೂ. ಹೂಡಿದರೆ, ಒಂದು ತಿಂಗಳಲ್ಲಿ ೨ ಕೋಟಿ ರೂ. ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ. ಬಳಿಕ ವಿವಿಧ ವೆಬ್‌ಸೈಟ್‌ಗಳನ್ನು ದೂರುದಾರರಿಗೆ ಕಳುಹಿಸಿ, ೨೦ ಲಕ್ಷ ರೂ. ಹೂಡಿಕೆ ಮಾಡಿಸಿದ್ದಾರೆ. ಕೆಲ ದಿನಗಳ ಬಳಿಕ ೨ ಕೋಟಿ ರೂ. ಲಾಭ ಪಡೆಯಲು ೫೦ ಲಕ್ಷ ರೂ. ಟಿಡಿಎಸ್ ಪಾವತಿ ಮಾಡಬೇಕೆಂದು ಹೇಳಿದಾಗ, ದೂರುದಾರರು ಸೋನಿಯಾ ಶೆಣೈ ಸೂಚಿಸಿದ ಖಾತೆಗೆ ೫೦ ಲಕ್ಷ ರೂ. ಟಿಡಿಎಸ್ ರೂಪದಲ್ಲಿ ಹಣ ಪಾವತಿಸಿದ್ದಾರೆ.
ಕೆಲ ದಿನಗಳ ಬಳಿಕ ಸೋನಿಯಾ ಶೆಣೈ, ರಾಯನ್ ಹಾಗೂ ಇಸ್ರೇಲ್ ಇಮ್ಯಾನ್ಯುಯಲ್‌ರ ವಂಚನೆ ಗೊತ್ತಾಗಿದೆ. ಹೀಗೆ ವಂಚಕರು ಹೇಳಿದಂತೆ ಜನವರಿ ೨೦೨೨ರಿಂದ ೨೦೨೩ರ ವರೆಗೆ ಬೀಟ್ ಕಾಯಿನ್‌ಗಳನ್ನು ಬಿಯಾನ್ಸ್ ವೆಬ್‌ಸೈಟ್ ಮೂಲಕ ಪಡೆಯಲು ಅಂದಾಜು ೯೫.೨೫ ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ. ಆದರೆ, ಇದುವರೆಗೂ ಒಂದೂ ರೂ. ಕೂಡ ಲಾಭ ಸಿಕ್ಕಿಲ್ಲ. ಅದರ ಮೌಲ್ಯದ ಬಿಟ್‌ಕಾಯಿನ್ ಕೂಡ ಕೊಟ್ಟಿಲ್ಲ. ಹಣ ಕೇಳಿದಾಗ ಸೋನಿಯಾ ಶೆಣೈ ವಿವಿಧ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಸೋನಿಯಾ ಶೆಣೈ, ಹಣಕಾಸು ವ್ಯವಹಾರ ಹಾಗೂ ಷೇರು ಮಾರುಕಟ್ಟೆ ಬಗ್ಗೆ ವಿಶೇಷ ಕಾರ್ಯಾಕ್ರಮ ನಡೆಸಿಕೊಡುತ್ತಾರೆ. ಹೀಗಾಗಿ ಅವರ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.