ಬದುಕು ಸಾರ್ಥಕವಾಗಲು ಸೇವಾ ಕಾರ್ಯಗಳಲ್ಲಿ ನಿರತರಾಗಿ: ಮಾತಾಜಿ ಬ್ರಹ್ಮಮಯಿ

Shri Dodamma Devi Anugrah National Award
ಶಿವಮೊಗ್ಗದಲ್ಲಿ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಸಮಾರಂಭವನ್ನು ಹೊಸಕೋಟೆ ಶ್ರೀ ಮಾತಾ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ಬ್ರಹ್ಮಮಯಿ ಉದ್ಘಾಟಿಸಿದರು. ಸುಂದರ್ ಜಯರಾಮನ್, ಮುಕ್ತಾ ಭಟ್, ಶ್ರೀ ಸಿದ್ದಪ್ಪಾಜಿ, ಶ್ರೀನಿವಾಸ ರೆಡ್ಡಿ ಇದ್ದರು.
Published on

ಶಿವಮೊಗ್ಗ: ಸೇವೆ ಎಂಬುದು ಭಗವತಿಯ ಪೂಜೆ ಇದ್ದಂತೆ. ಸೇವಾ ಕಾರ್ಯದಲ್ಲಿ ಆರಂಭದಲ್ಲಿ ಕಷ್ಟ, ನೋವು, ಅವಮಾನಗಳನ್ನು ಎದುರಿಸಿದರೂ ಅಂತವರಿಗೆ ಭಗವಂತನ ಕೃಪೆ ಇರುವುದರಿಂದ ನಿರ್ವಿಘ್ನಗಳು ನಿರಾತಂಕವಾಗಿ ದೂರವಾಗಿ ಬದುಕು ಸಾರ್ಥಕ ಮತ್ತು ಧನ್ಯವಾಗುವುದು ನಿಶ್ಚಿತ ಎಂದು ಹೊಸಕೋಟೆ ಶ್ರೀ ಮಾತಾ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ಬ್ರಹ್ಮಮಯಿ ಹೇಳಿದರು.

ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ನಿಂದ ನವರಾತ್ರಿ ಅಂಗವಾಗಿ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಸೇರಿ ಅನೇಕ ಮಹಾತ್ಮರು ನಿರ್ಗತಿಕರ ಸೇವೆಯೇ ಅತ್ಯುತ್ತಮ ಕಾರ್ಯ ಎಂದು ಸಾರಿದ್ದಾರೆ. ಅವರ ತತ್ವ ಮತ್ತು ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಕ್ಷಯ ಟ್ರಸ್ಟ್‌ನ ನಾರಾಯಣನ್ ಕೃಷ್ಣನ್ ಪರವಾಗಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಧುರೈ ಅಕ್ಷಯ ಟ್ರಸ್ಟ್‌ನ ಆಡಳಿತಾಧಿಕಾರಿ ಸುಂದರ್ ಜಯರಾಮನ್, ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ನ ಸೇವಾ ಕಾರ್ಯಗಳಿಗೆ ಅಗತ್ಯ ನೆರವು ನೀಡುತ್ತೇವೆ. ಸೇವೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಸೇವೆಯಿಂದಲೇ ಬದುಕು ಸಾರ್ಥಕ ಎಂಬುದು ನಮ್ಮ ಟ್ರಸ್ಟ್‌ನ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಬಡವರು, ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಕರಿಗೆ ಆಶ್ರಯ ಕಲ್ಪಿಸಲಾಗಿದೆ. ನಮ್ಮ ಸೇವಾ ಕಾರ್ಯಕ್ಕೆ ಅನೇಕ ದಾನಿಗಳು ಸಹಕಾರ ನೀಡಿದ್ದು ಇತರೆ ಸಂಘಟನೆಗಳಿಗೆ ಮಾರ್ಗದರ್ಶಿ ಹಾಗೂ ಸ್ಫೂರ್ತಿಯಾಗಿದೆ ಎಂದರು.
ಶ್ರೀ ಲಲಿತಾ ಪುರಸ್ಕಾರ ಪುರಸ್ಕೃತೆ ಮುಕ್ತಾ ಭಟ್ ಮಾತನಾಡಿ, 20 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದನ್ನು ಗುರುತಿಸಿ ನನಗೆ ಲಲಿತ ಪುರಸ್ಕಾರ ನೀಡಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಬೆಂಗಳೂರು ಶ್ರೀ ಭವತಾರಿಣಿ ಆಶ್ರಮ ಮತ್ತು ಪೋಲೊಹಳ್ಳಿಯ ವಿವೇಕಮ ಮಾತಾಜಿ, ಹಿರಿಯೂರು ಶ್ರೀ ಶಾರದಾಶ್ರಮದ ಅಧ್ಯಕ್ಷೆ ಚೈತನ್ಯಮಯಿ ಅವರಿಗೆ ಗೌರವ ಸಮರ್ಪಿಸಲಾಯಿತು.
ದೇವಿ ಉಪಾಸಕ ಶ್ರೀ ಸಿದ್ದಪ್ಪಾಜಿ, ಬೆಂಗಳೂರು ಹೊಸೂರು ರಸ್ತೆ ರಮಣ ಮಹರ್ಷಿ ಆಶ್ರಮ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಭೂ ವಿಜ್ಞಾನಿಗಳು, ಬೆಂಗಳೂರು ಸೇಕ್ರೆಡ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ. ವಾಸುದೇವ್ ಉಪಸ್ಥಿತರಿದ್ದರು. ನಂತರ ಶ್ರೀ ದೊಡ್ಡಮ್ಮ ದೇವಿ ಮತ್ತು ಜಲದುರ್ಗಮ್ಮ ದೇವಿಯ ಉತ್ಸವಮೂರ್ತಿ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net