ಖುಷಿ ಖುಷಿಯಾಗಿ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ವರನಿಗೆ ಮಾರ್ಗ ಮಧ್ಯೆದಲ್ಲೇ ಶಾಕ್​ ನೀಡಿದ ಅಧಿಕಾರಿಗಳು!

Groom
Published on

ಕೊಚ್ಚಿ: ಮದುವೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ವರನೊಬ್ಬನಿಗೆ ಕೇರಳದ ಮೋಟಾರು ವಾಹನ ಇಲಾಖೆಯ ಎನ್ಫೋರ್ಸ್​ಮೆಂಟ್​​​ ಸ್ಕ್ವಾಡ್​ ಕಾರನ್ನು ವಶಕ್ಕೆ ಪಡೆಯುವ ಮೂಲಕ ನಿಶ್ಚಿತಾರ್ಥದ ಸಂಭ್ರಮಕ್ಕೂ ಮುನ್ನವೇ ಶಾಕ್​ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಕಾಕ್ಕನಾಡಿನ ನಿವಾಸಿ ರೆನಿಟ್​ ಎಂಬಾತ ತನ್ನ ಸಂಬಂಧಿಕರೊಂದಿಗೆ ಶನಿವಾರ ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ನಿಶ್ಚಿತಾರ್ಥಕ್ಕೆ ತೆರಳಿದ್ದ. ಈ ವೇಳೆ ತಾವು ಪ್ರಯಾಣ ಬೆಳೆಸುತ್ತಿದ್ದ ಇನೋವಾ ಕಾರನ್ನು ಅಡ್ಡಗಟ್ಟಿದ ಅಧಿಕಾರಿಗಳು ಇದೊಂದು ನಕಲಿ ಟ್ಯಾಕ್ಸಿ ಎಂದು ವಶಕ್ಕೆ ಪಡೆದಿದ್ದಾರೆ. ಇದರಿಂದ ರಾಜಕ್ಕಾಡ್​ನಲ್ಲಿ ನಿಗದಿಯಾಗಿ ನಿಶ್ಚಿತಾರ್ಥಕ್ಕೆ ಕೆಲಕಾಲ ವಿಳಂಬ ಎದುರಾಯಿತು.

ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆದು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ ಕಾರಿನ ಮಾಲೀಕತ್ವ ರೆನಿಟ್​ ಸ್ನೇಹಿತನ ಹೆಸರಿನಲ್ಲಿದೆ. ಅಲ್ಲದೆ, ನಕಲಿ ಟ್ಯಾಕ್ಸಿಯನ್ನು ಬಳಸಿದ್ದಕ್ಕೆ ವರನಿಗೂ 6000 ದಂಡವನ್ನು ಸ್ಥಳದಲ್ಲೇ ವಿಧಿಸಿದ್ದಾರೆ.

ನಿಶ್ಚಿತಾರ್ಥಕ್ಕೆ ತೆರಳಬೇಕೆಂದರು ಅಧಿಕಾರಿಗಳು ಕಾರನ್ನು ಬಿಡದಿದ್ದಾಗ ಕೆಲಕಾಲ ಅಧಿಕಾರಿಗಳು ಮತ್ತು ವರನ ಸಂಬಂಧಿಕರ ನಡುವೆ ವಾಗ್ವಾದ ನಡೆಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಬಳಿಕ ವಾಹನದ ಕೀ ಅನ್ನು ಕಿತ್ತುಕೊಂಡು ಅಧಿಕಾರಿಗಳು ಕಾರು ವಶಪಡಿಸಿಕೊಂಡು ಬಂದಿದ್ದಾರೆ.

ರಸ್ತೆಯಲ್ಲೇ ಸುಮಾರು ಅರ್ಧ ಗಂಟೆ ಕಾದು ಬಳಿಕ ಮತ್ತೊಂದು ವಾಹನವನ್ನು ಹಿಡಿದು ನಿಶ್ಚಿತಾರ್ಥಕ್ಕೆ ತೆರಳಿದ್ದಾರೆ. 11.50ಕ್ಕೆ ಕಾರ್ಯಕ್ರಮದ ಸ್ಥಳವನ್ನು ತಲುಪಿದ್ದು, ಅಧಿಕಾರಿಗಳು ಬೇಕಂತಲೇ ವಿಳಂಬ ಮಾಡಿಸಲು ಹೀಗೆ ಮಾಡಿದ್ದಾರೆ. ನಮ್ಮ ವಾಹನವನ್ನು ಮಾತ್ರ ತಪಾಸಣೆ ನಡೆಸಿ ಬೇರೆ ವಾಹನವನ್ನು ಮುಟ್ಟಿಯೂ ನೋಡಲಿಲ್ಲ. ಇದೆಲ್ಲಾ ಅವರ ಪೂರ್ವಯೋಜಿತ ಕೃತ್ಯ ಎಂದು ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net