ಕೋಲಾರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನತ್ಸವದ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿರುವ ದೀರ್ಘ ಸಂಚಲನದ ಹಿನ್ನೆಲೆಯಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿಎಸ್ ಆದೇಶಿಸಿದ್ದಾರೆ.
ನಗರದ ಪಲ್ಲವಿ ವೃತ್ತದಿಂದ ತ್ರಿಕೋಣ ವೃತ್ತ, ಗಡಿಯಾರ ಗೋಪುರ, ಶಾಹಿನ್ ಷಾ ನಗರ ಪ್ರವೇಶ ದ್ವಾರ, ಈದ್ಗ ಮೈದಾನ ಪ್ರದೇಶ, ಸಾಗರ್ ಹೋಟೆಲ್ ಮಾರ್ಗವಾಗಿ ಮಾಲೂರು ಜಿಗಜಾಗ್ ವರೆಗಿನ ಪ್ರದೇಶ, ಸಂಚಾರಿ ಪೊಲೀಸ್ ಠಾಣೆ ಜಂಕ್ಷನ್, ಶಾರದಾ ಟಾಕೀಸ್ ಜಂಕ್ಷನ್ ಹಾಗೂ ದೊಡ್ಡಪೇಟೆ ರಸ್ತೆ ಪ್ರದೇಶಗಳಲ್ಲಿ ಭಾರತೀಯ ದಂಡ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದ್ದೇಶಿಸಿದ್ದಾರೆ.
*ಮಾರ್ಗ ಬದಲು*
ಶಾಂತಿ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ದೀರ್ಘ ಸಂಚಲನವು ಕೋಲಾರ ನಗರದಲ್ಲಿ ನಿಷೇಧಾಜ್ಞೆ ಹೇರಿರುವ ಪ್ರದೇಶಗಳನ್ನು ಹೊರತುಪಡಿಸಿ ಮಾರ್ಗ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಸಂಚಲನವು ಟೇಕಲ್ ಕ್ರಾಸ್ ನಿಂದ ಟೇಕಲ್ ಮುಖ್ಯರಸ್ತೆ ತಿರುವು ಪಡೆದುಕೊಂಡು ಜಯನಗರ, ಟೇಕಲ್ ಜಿಗ್ ಜಗ್ ಎನ್ ಹೆಚ್ -75 ಸರ್ವಿಸ್ ರಸ್ತೆ ಮೂಲಕ ಮಾಲೂರು ಜಿಗ್ ಜಾಗ್ ನಿಂದ ಒಕ್ಕಲೇರಿ ರಸ್ತೆ ಮೂಲಕ ಹಾದುಹೋಗಲು ಅನುಮತಿಸಲಾಗಿದೆ ಎಂದು ಎಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.