ಕೇಂದ್ರ ಬಜೆಟ್​ 2023: ಈ ಬಾರಿಯೂ ಸಾಂಪ್ರದಾಯಿಕ “ಬಹಿ ಖಾತಾ” ಬದಲು ಟ್ಯಾಬ್​ ಮೂಲಕ ಬಜೆಟ್​ ಮಂಡನೆ

Nirmala
Published on

ನವದೆಹಲಿ: ಜಾಗತಿಕ ಆರ್ಥಿಕ ಸಂಕಷ್ಟದ ನಡುವೆ ಇಂದು ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್​ ಮೇಲೆ ವಿಶ್ವದ ದೃಷ್ಟಿ ನೆಟ್ಟಿದೆ. ದೇಶದಲ್ಲಿ ಬೆಲೆ ಏರಿಕೆಗಳಿಂದ ತತ್ತರಿಸುವ ಜನ ಸಾಮಾನ್ಯರ ನಿರೀಕ್ಷೆ ಹೆಚ್ಚಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​ ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.

ಇಂದೆಲ್ಲ ಬಜೆಟ್​ ಪ್ರತಿಗಳಿದ್ದ ಸೂಟ್​ಕೇಸ್ ಹಿಡಿದುಕೊಂಡು ಸಂಸತ್ತಿಗೆ ಆಗಮಿಸಲಾಗುತ್ತಿತ್ತು. ಸೂಟ್​ಕೇಸ್​ ವಿದೇಶಿ ಸಂಸ್ಕೃತಿ ಆಗಿದ್ದರಿಂದ ಅದಕ್ಕೆ ಗುಡ್​ಬೈ ಹೇಳಿದ್ದ ನಿರ್ಮಲಾ ಸೀತಾರಾಮನ್​ ಸಾಂಪ್ರದಾಯಿಕ “ಬಹಿ ಖಾತಾ” ಹಿಡಿದು ಸಂಸತ್ತಿಗೆ ಆಗಮಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದರು.

2021ರಲ್ಲಿ ಬಹಿ ಖಾತಾ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದ ನಿರ್ಮಲಾ ಸೀತಾರಾಮನ್​ ಬಜೆಟ್​ ಅನ್ನು ಟ್ಯಾಬ್​ ಮೂಲಕ ಮಂಡನೆ ಮಾಡಿದ್ದರು. ಈ ಮೂಲಕ ಬಜೆಟ್​ಗೆ ಡಿಜಿಟಲ್​ ಸ್ಪರ್ಶ ನೀಡಿದ್ದರು. ಅಲ್ಲದೆ, ಮೊದಲ ಬಾರಿಗೆ ಕಾಗದರಹಿತ ಬಜೆಟ್​ ಮಂಡನೆ ಮಾಡಿದ ಹೆಸರಿಗೆ ಪಾತ್ರರಾದರು. ಈ ಬಾರಿಯು ಅದನ್ನೆ ಮುಂದುವರಿಸಿರುವ ನಿರ್ಮಲಾ ಸೀತಾರಾಮನ್​ ಟ್ಯಾಬ್​ ಮೂಲಕ ಬಜೆಟ್​ ಮಂಡನೆ ಮಾಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net