

ಢಾಕಾ: ಐದನೇ ಸಲ ಪ್ರಧಾನಿ ಆಗಿ ಅಧಿಕಾರಕ್ಕೇರಿದ್ದರೂ ಹಿಂಸಾಚಾರಕ್ಕೆ ವಿಚಲಿತಗೊಂಡು ರಾಜೀನಾಮೆ ನೀಡಿ ದೇಶದಿಂದಲೇ ಪರಾರಿ ಆಗಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಅಧಿಕಾರಪರ್ವ ಈ ಮೂಲಕ ಅಂತ್ಯಗೊಂಡಂತಾಗಿದೆ.
ಬಾಂಗ್ಲಾ ದೇಶದ ಪ್ರಧಾನಿ ಆಗಿ 1996ರಲ್ಲಿ ಮೊದಲ ಸಲ ಅಧಿಕಾರ ಸ್ವೀಕರಿಸಿದ್ದ ಹಸೀನಾ, 2001ರ ವರೆಗೂ ಆಡಳಿತ ನಡೆಸಿದ್ದರು. ನಂತರ ಅಧಿಕಾರ ಕಳೆದುಕೊಂಡಿದ್ದ ಹಸೀನಾ, 2009ರಲ್ಲಿ ಮತ್ತೆ ಅಧಿಕಾರ ಗಳಿಸಿದ್ದರು. ಆ ಬಳಿಕ ಗದ್ದುಗೆ ಬಿಟ್ಟುಕೊಡದ ಹಸೀನಾ ಒಟ್ಟು 15 ವರ್ಷಗಳ ಕಾಲ ನಿರಂತರವಾಗಿ ಅಧಿಕಾರ ನಡೆಸಿದ್ದರು. ಇತ್ತೀಚೆಗೆ ನಡೆದ ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿಲ್ಲ ಎಂದು ವಿಪಕ್ಷಗಳು ಮತದಾನ ಬಹಿಷ್ಕರಿಸಿದ್ದವು. ಆಗ ವಿಪಕ್ಷಗಳನ್ನು ಭಯೋತ್ಪಾದಕ ಸಂಘಟನೆಗಳು ಎಂದು ಹಸೀನಾ ಜರಿದಿದ್ದರು. ಆದರೆ ‘ಉಕ್ಕಿನ ಮಹಿಳೆ’ ಎಂದೇ ಹೆಸರಾಗಿದ್ದ ಹಸೀನಾ, ಜನರ ಹಿಂಸಾತ್ಮಕ ಪ್ರತಿಭಟನೆ, ರಾಜೀನಾಮೆ ಒತ್ತಾಯಕ್ಕೆ ಕೊನೆಗೂ ಆಕೆ ಮಣಿಯುವಂತಾಗಿದೆ. ಈ ಮೂಲಕ ಹಸೀನಾ ಪರ್ವ ಅಂತ್ಯವಾಗಿದೆ.
ಹಸೀನಾ ಹಿನ್ನೆಲೆ: ಶೇಖ್ ಹಸೀನಾ ಬಾಂಗ್ಲಾ ದೇಶದ ಕ್ರಾಂತಿಕಾರಿ ಶೇಖ್ ಮುಜಿಬುರ್ ರಹಮಾನ್ ಅವರ ಪುತ್ರಿ. 1975ರಲ್ಲಿ ನಡೆದ ಮಿಲಿಟರಿ ದಂಗೆಯಲ್ಲಿ ಅಂದು ಪ್ರಧಾನಿಯಾಗಿದ್ದ ಅವರ ತಂದೆ, ತಾಯಿ ಮತ್ತು ಮೂವರು ಸಹೋದರರನ್ನು ಹತ್ಯೆ ಮಾಡಲಾಗಿತ್ತು. 6 ವರ್ಷ ವಿದೇಶದಲ್ಲಿದ್ದ ಹಸೀನಾ ಬಳಿಕ ಅವಾಮಿ ಲೀಗ್ ಪಾರ್ಟಿ ನೇತೃತ್ವ ವಹಿಸಿಕೊಂಡರು.
ಭಾಷಣಕ್ಕೂ ಸಿಗಲಿಲ್ಲ ಕಾಲಾವಕಾಶ
ಶೇಖ್ ಹಸೀನಾ ಬಾಂಗ್ಲಾ ದೇಶದಿಂದ ಹೊರಡುವ ಮುನ್ನ ಅವರ ದೇಶವನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದರು. ಆದರೆ ಹಿಂಸಾಚಾರ ಉಲ್ಬಣಿಸಿದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅದು ಸಾಧ್ಯವಾಗಲಿಲ್ಲ. ಪ್ರಧಾನಿ ಭದ್ರತಾ ಪಡೆಯವರು ಕೂಡಲೇ ದೇಶವನ್ನು ಬಿಡುವಂತೆ ಸಲಹೆ ನೀಡಿದ್ದರಿಂದ ಹಸೀನಾಗೆ ಭಾಷಣ ತಯಾರಿಗೂ ಸಮಯ ಸಿಗಲಿಲ್ಲ ಎನ್ನಲಾಗಿದೆ.
ಮುಂದೇನು?
ಮಧ್ಯಂತರ ಸರ್ಕಾರ ರಚಿಸುವುದಾಗಿ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಹೇಳಿದ್ದಾರೆ. ಹೀಗಾಗಿ ಆಡಳಿತದ ವಿಚಾರದಲ್ಲಿ ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ. ಮಾಹಿತಿ ಪಡೆದ ಪ್ರಧಾನಿ ಮೋದಿ: ಬಾಂಗ್ಲಾ ದೇಶದಲ್ಲಿನ ಬೆಳವಣಿಗೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ. ಬಾಂಗ್ಲಾದೇಶದಲ್ಲಿ ಏನೇನಾಗಿದೆ ಎನ್ನುವ ವಿದ್ಯಮಾನಗಳ ಕುರಿತು ವಿದೇಶಾಂಗ ಸಚಿವ ಜೈಶಂಕರ್ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ಲಂಡನ್ಗೆ ತೆರಳಲು ಭಾರತ ನೆರವು
ಹಸೀನಾ ಹೆಲಿಕಾಪ್ಟರ್ನಲ್ಲಿ ಸಹೋದರಿ ಜತೆ ಭಾರತಕ್ಕೆ ಆಗಮಿಸಿದ್ದು, ಹಿಂಡನ್ ಏರ್ಬೇಸ್ನಲ್ಲಿ ಇಳಿದಿದ್ದರು. ಹಸೀನಾ ಆಗಮನ- ನಿರ್ಗಮನ ವೇಳೆ ಭಾರತೀಯ ವಾಯುಪಡೆ ಕಣ್ಗಾವಲಿಟ್ಟು ನೆರವಾಗಿದೆ. ಅಲ್ಲದೆ, ಆಕೆ ಲಂಡನ್ಗೆ ತೆರಳಲಿಕ್ಕೂ ಭಾರತ ಸಹಾಯ ಮಾಡಿದೆ.
ಯಾಕೆ ಪ್ರತಿಭಟನೆ?
ಬಾಂಗ್ಲಾದೇಶದಲ್ಲಿನ ಸರ್ಕಾರಿ ಉದ್ಯೋಗ ಮೀಸಲಾತಿ ನೀತಿ ವಿರುದ್ಧವಾಗಿ ಕಳೆದ ತಿಂಗಳಲ್ಲೇ ಪ್ರತಿಭಟನೆ ಆರಂಭಗೊಂಡಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ 1971ರಲ್ಲಿನ ಯುದ್ಧದಲ್ಲಿ ಹೋರಾಡಿದ್ದವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30 ಮೀಸಲಾತಿ ನೀಡಿದ್ದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ಈ ಮೀಸಲಾತಿ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಪ್ರಯೋಜನಕಾರಿ ಆಗಲಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಇದರ ಬದಲಿಗೆ ಮೆರಿಟ್ ಆಧಾರಿತ ಮೀಸಲಾತಿ ಜಾರಿಗೆ ತರಲು ಆಗ್ರಹಿಸುತ್ತಿದ್ದಾರೆ. ಈ ಕುರಿತ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಅವಾಮಿ ಲೀಗ್ ಅದನ್ನು ಹತ್ತಿಕ್ಕಲು ಯತ್ನಿಸಿತು. ಜೊತೆಗೆ, ‘ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳಿಗೆ ಮೀಸಲಾತಿ ಸಿಗದೆ ಇನ್ಯಾರಿಗೆ ಸಿಗಬೇಕು?’ ಎಂದು ಶೇಖ್ ಹಸೀನಾ ನೀಡಿದ್ದ ಹೇಳಿಕೆ ಪ್ರತಿಭಟನಾಕಾರರನ್ನು ಇನ್ನಷ್ಟು ಕೆರಳಿಸಿತ್ತು. ಪರಿಣಾಮವಾಗಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ಒಂದೇ ದಿನ 90ಕ್ಕೂ ಅಧಿಕ ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದರು. ಪ್ರತಿಭಟನೆ ಆರಂಭ ಆದಾಗಿನಿಂದ ಇದುವರೆಗೆ ಈಗಾಗಲೇ 300ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಹಳೆಯ ಜ್ವಲಂತ ಸಮಸ್ಯೆ
ಬಾಂಗ್ಲಾ ದೇಶದಲ್ಲಿ ಮೀಸಲಾತಿ ಹಲವು ವರ್ಷಗಳಿಂದ ಕಾಡುತ್ತಿರುವ ಜ್ವಲಂತ ಸಮಸ್ಯೆ ಆಗಿದೆ. 1972ರಿಂದಲೇ ಇರುವ ಈ ಮೀಸಲಾತಿ ವ್ಯವಸ್ಥೆ ತೆಗೆದು ಹಾಕುವಂತೆ 2018ರಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ಹುದ್ದೆಗಳಿಗೆ ಸಂಬಂಧಿತ ಕೋಟಾ ರದ್ದುಪಡಿಸಲಾಗಿತ್ತು. ಸರ್ಕಾರಿ ಉದ್ಯೋಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಶೇ.30 ಮೀಸಲಾತಿ ರದ್ದುಪಡಿಸಿದ್ದು ಕಾನೂನುಬಾಹಿರ ಎಂದು ಇತ್ತೀಚೆಗೆ ಹೈಕೋರ್ಟ್ ನೀಡಿದ್ದ ಆದೇಶ ಪ್ರತಿಭಟನೆ ಭುಗಿಲೇಳಲು ಕಾರಣವಾಗಿತ್ತು. ಆ ಬಳಿಕ ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂಕೋರ್ಟ್, ಸರ್ಕಾರಿ ಉದ್ಯೋಗಗಳಲ್ಲಿ ಶೇ.93 ಮೆರಿಟ್ ಆಧಾರಿತವಾಗಿ ನೀಡಬೇಕು, ಉಳಿದಿದ್ದನ್ನಷ್ಟೇ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಮೀಸಲಿಡಬೇಕು ಎಂದು ಆದೇಶಿಸಿತ್ತು. ಅದಾಗ್ಯೂ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗದ್ದರಿಂದ ಹಿಂಸಾಚಾರ ಮುಂದುವರಿದಿದೆ.
ದೇವಸ್ಥಾನಗಳ ಮೇಲೆ ದಾಳಿ ಹಿಂದು ಕೌನ್ಸಿಲರ್ನ ಹತ್ಯೆ
ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ಹಿಂದು ಕೌನ್ಸಿಲರ್ ಒಬ್ಬರ ಹತ್ಯೆ ಆಗಿದೆ. ರಂಗಾಪುರ ಸಿಟಿ ಕಾರ್ಪೆರೇಷನ್ನ ಕೌನ್ಸಿಲರ್ ಹರಧನ್ ರಾಯ್ ಹರ ಹತ್ಯೆಗೀಡಾದವರು. ಅಲ್ಲದೆ, ಇಸ್ಕಾನ್ ಹಾಗೂ ಕಾಳಿ ದೇಗುಲ ಸೇರಿದಂತೆ ದೇವಸ್ಥಾನಗಳನ್ನು ಮತ್ತು ಹಿಂದು ಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ ಎಂದೂ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.