

ನವದೆಹಲಿ: ಚಿಲ್ಲರೆ ಸಮಸ್ಯೆ ಹಿನ್ನೆಲೆಯಲ್ಲಿ ಮಾ.1ರಿಂದ ತನ್ನ ಎಟಿಎಂಗಳಲ್ಲಿ 2 ಸಾವಿರ ರೂ.ನೋಟು ಪೂರೈಕೆ ಸ್ಥಗಿತಗೊಳಿಸಲು ಇಂಡಿಯನ್ ಬ್ಯಾಂಕ್ ನಿರ್ಧಾರ ಕೈಗೊಂಡ ಬೆನ್ನಲ್ಲೇ ಇನ್ನೂ ಹಲವು ಬ್ಯಾಂಕ್ಗಳು ಇದೇ ಹಾದಿ ತುಳಿದಿವೆ.
ದೇಶಾದ್ಯಂತ ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ಪಡೆಯುವ ಗ್ರಾಹಕರು ಚಿಲ್ಲರೆ ಮಾಡಿಸಿಕೊಳ್ಳಲು ಪನಃ ಬ್ಯಾಂಕ್ಗೆ ಬರುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹೊರಗೆ ಚಿಲ್ಲರೆ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸುವ ಸಲುವಾಗಿ ಬಹುತೇಕ ಬ್ಯಾಂಕ್ಗಳು ತಮ್ಮ ಎಟಿಎಂಗಳಲ್ಲಿ 2 ಸಾವಿರ ರೂ. ನೋಟುಗಳ ಪೂರೈಕೆ ಸ್ಥಗಿತಗೊಳಿಸಲು ತೀರ್ವನಿಸಿರುವುದಾಗಿ ತಿಳಿದು ಬಂದಿದೆ. ಇದರ ಬದಲಿಗೆ -ಠಿ; 500 ಮತ್ತು -ಠಿ; 200 ಮುಖಬೆಲೆ ನೋಟಿನ ಸಂಖ್ಯೆಯನ್ನು ಹೆಚ್ಚಿಸಲಿವೆ. ಎಟಿಎಂಗಳಲ್ಲಿ 2 ಸಾವಿರ ರೂ. ನೋಟು ವಿತರಣೆ ಸ್ಥಗಿತಗೊಳಿಸುವ ಕುರಿತಂತೆ ಆರ್ಬಿಐ ಮತ್ತು ಹಣಕಾಸು ಸಚಿವಾಲಯ ಯಾವುದೇ ನಿರ್ದೇಶನ ನೀಡಿಲ್ಲ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ತನ್ನ ಎಟಿಎಂಗಳಲ್ಲಿ 200 ಮತ್ತು 500 ರೂ. ನೋಟುಗಳ ಸಂಖ್ಯೆ ಹೆಚ್ಚಿಸುತ್ತಿದೆ. ಈ ಬಗ್ಗೆ ಫೆ.17ರಂದೇ ತನ್ನ ಎಲ್ಲ ಶಾಖೆಗಳಿಗೂ ಸೂಚನೆ ನೀಡಿದೆ. ಎಟಿಎಂಗಳಲ್ಲಿನ 2 ಸಾವಿರ ರೂ. ನೋಟು ಜೋಡಿಸುವ ಕ್ಯಾಸೆಟ್ಗಳನ್ನು ತೆಗೆಯಲು ಆದೇಶಿಸಲಾಗಿದ್ದು, ಇದರ ಬದಲಿಗೆ 200 ರೂ. ನೋಟುಗಳ ಕ್ಯಾಸೆಟ್ಗಳ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಎಟಿಎಂ ಹೊರತಾಗಿ ಬ್ಯಾಂಕ್ನ ಶಾಖೆಗಳಲ್ಲಿ ಹಣ ವಿತ್ಡ್ರಾ ಮಾಡುವವರಿಗೆ 2 ಸಾವಿರ ರೂ. ನೋಟುಗಳ ನೀಡಿಕೆ ಮುಂದುವರಿಯಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಎರಡು ಸಾವಿರ ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವರ್ಷ ಆರ್ಟಿಐ ಅರ್ಜಿಯೊಂದಕ್ಕೆ ನೀಡಿದ ಮಾಹಿತಿಯಲ್ಲಿ ಸ್ಪಷ್ಟಪಡಿಸಿತ್ತು.