ರೈತರ ಜಮೀನುಗಳಲ್ಲಿ ಕಾಡಾನೆಗಳ ದಾಂಧಲೆ

IMG-20241017-WA0274
ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ಭಾಗದ ಜಮೀನೊಂದರಲ್ಲಿ ಬೀಡುಬಿಟ್ಟ ಕಾಡಾನೆಗಳು.
Published on

ಹುಣಸೂರು: ನಾಗರಹೊಳೆ ಉದ್ಯಾನದಿಂದ ಹೊರಬಂದಿರುವ ನಾಲ್ಕು ಕಾಡಾನೆಗಳು ವೀರನಹೊಸಳ್ಳಿ ವನ್ಯಜೀವಿ ವಲಯದ ಅಂಚಿನ ಗ್ರಾಮಗಳಲ್ಲಿ ಸಾಕಷ್ಟು ಬೆಳೆ ನಾಶ ಮಾಡಿ ಗುರುವಾರ ನಾಗಪುರ ಬಳಿಯ ವುಡ್‌ಲಾಟ್‌ನಲ್ಲಿ ಬೀಡು ಬಿಟ್ಟಿವೆ.

ಮೂರು ದಿನಗಳಿಂದ ನಾಗಪುರ, ಭರತವಾಡಿ ಗ್ರಾಮದ ಭಾಗದ ತೋಟದಲ್ಲಿ ಆಶ್ರಯ ಪಡೆದಿದ್ದ ಕಾಡಾನೆಗಳು ಭರತವಾಡಿ ವೆಂಕಟೇಶ್, ಇಂದ್ರೇಶ್ ಹಾಗೂ ಕೇರಳ ಮೂಲದ ವ್ಯಕ್ತಿಯ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ತಿಂದು-ತುಳಿದು ಹಾಳು ಮಾಡಿವೆ. ಅಲ್ಲದೆ ತೆಂಗಿನ ಮರಗಳನ್ನು ಉರುಳಿಸಿವೆ. ವೆಂಕಟೇಶ್ ಅವರ ಟ್ರ್ಯಾಕ್ಟರ್ ಹಾನಿಗೊಳಿಸಿವೆ. ನೀರಾವರಿ ಪೈಪ್‌ನ್ನು ಪುಡಿ ಮಾಡಿವೆ. ಮುದಗನೂರು, ವೀರನಹೊಸಹಳ್ಳಿ, ಭರತವಾಡಿಯಲ್ಲಿ ಭತ್ತದ ಪೈರುಗಳನ್ನೇ ನಾಶ ಮಾಡಿದೆ.

ಗುರುವಾರ ಬೆಳಗ್ಗೆ ಕಾಡಾನೆಗಳು ಬೀಡು ಬಿಟ್ಟಿದ್ದ ಸ್ಥಳಗಳಿಗೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಒಂದಷ್ಟು ಸಿಡಿಮದ್ದು ಸಿಡಿಸಿದರು. ಯಾವುದೇ ಸದ್ದಿಗೂ ಜಗ್ಗಲಿಲ್ಲ. ಬದಲಾಗಿ ಘೀಳಿಟ್ಟು ಜನರನ್ನೇ ಬೆದರಿಸಿದವು. ಕೊನೆಗೆ ಜೆಸಿಬಿ, ಟ್ರಾೃಕ್ಟರ್ ಮೂಲಕ ಓಡಿಸಲು ಮುಂದಾದಾಗ ಸಲಗವೊಂದು ಟ್ರಾೃಕ್ಟರ್ ಮುಂಭಾಗಕ್ಕೆ ಗುದ್ದಿ ಹಾನಿಗೊಳಿಸಿತು. ಟ್ರಾೃಕ್ಟರ್ ಓಡಿಸುತ್ತಿದ್ದ ವೆಂಕಟೇಶ್ ಗಾಯಗೊಂಡರು. ಅಲ್ಲದೇ ಅರಣ್ಯ ಅಧಿಕಾರಿ ಚಂದ್ರೇಶ್ ಮತ್ತು ತಂಡದ ಮೇಲೆ ದಾಳಿ ಇಡಲು ಮುಂದಾಯಿತು.

ಕಾರ್ಯಾಚರಣೆಗೆ ಗಣೇಶ ಆನೆಯನ್ನು ಸಹ ಕರೆಸಲಾಗಿದ್ದು, ರಾತ್ರಿ ವೇಳೆಗೆ ನಾಗರಹೊಳೆ ಉದ್ಯಾನಕ್ಕೆ ಅಟ್ಟಲಾಗುವುದೆಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net