

ಮುಂಬೈ: ಬಾಲಿವುಡ್ ನಟ ಇಮ್ರಾನ್ ಹಶ್ಮಿ (Imran Hashmi) ‘ಗೂಢಚಾರಿ 2’ (Goodachari 2) ಸೆಟ್ನಲ್ಲಿ ಪೆಟ್ಟಾಗಿದೆ. ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಕುತ್ತಿಗೆಗೆ ಪೆಟ್ಟಾಗಿದ್ದು, ನಟನಿಗೆ ಚಿಕಿತ್ಸೆ ನೀಡಲಾಗಿದೆ.
ಇಮ್ರಾನ್ ಹಶ್ಮಿ ಅವರು ‘ಗೂಡಾಚಾರಿ 2’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಶೂಟಿಂಗ್ ಸೆಟ್ನಲ್ಲಿ ಸಾಹಸ ದೃಶ್ಯವೊಂದರಲ್ಲಿ ಇಮ್ರಾನ್ ಹಶ್ಮಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಿಗಿಯುವಾಗ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದಾರೆ. ಈ ಸಾಹಸ ದೃಶ್ಯವನ್ನು ಸ್ವತಃ ಇಮ್ರಾನ್ ಹಶ್ಮಿ ವಿನ್ಯಾಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ಗಾಯಗೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಮ್ರಾನ್ ಹಶ್ಮಿ ಒಂದು ದೊಡ್ಡ ಅಪಘಾತದಿಂದ ಬದುಕುಳಿದಿದ್ದಾರೆ.
ಕಬ್ಬಿಣದ ತುಂಡು ಕುತ್ತಿಗೆಗೆ ತಗುಲಿ ಗಾಯಗೊಂಡಿದ್ದಾರೆ. ಈ ಅವಘಡದಿಂದಾಗಿ ಚಿತ್ರೀಕರಣ ಕೆಲಕಾಲ ಸ್ಥಗಿತಗೊಂಡಿತ್ತು. ಇಮ್ರಾನ್ ಹಶ್ಮಿ ಗಾಯಗೊಂಡಾಗ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದರು. ಇದೀಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ವಿನಯ್ ಕುಮಾರ್ ಸಿರಿಗಿನಿಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಅಭಿಷೇಕ್ ಅಗರ್ವಾಲ್ ಮತ್ತು ಅನಿಲ್ ಸುಂಕರ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.ಅಂದಹಾಗೆ, ಮೊದಲ ಬಾರಿಗೆ ‘ಗೂಢಚಾರಿ 2’ ಸಿನಿಮಾದ ಮೂಲಕ ಇಮ್ರಾನ್ ಹಶ್ಮಿ ಅವರು ತೆಲುಗಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಅಡವಿ ಶೇಷ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.