

ಸಾಗರ: ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಆಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂತಹ ಪ್ರಯತ್ನದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಯೋಜನಾ ಕಚೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯವೈಖರಿ ನೋಡಿ ಸಹಿಸಿಕೊಳ್ಳಲು ಸಾಧ್ಯವಾಗದೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಮಹಿಳೆಯರು ಅದಕ್ಕೆ ಕಿವಿಗೊಡಬಾರದು. 100 ರೂ. ಸಾಲ ಕೇಳಿದರೆ ಕೊಡದ ಈ ದಿನಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮನೆ ನಿರ್ಮಾಣ, ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಸೇರಿ ವಿವಿಧ ಅಗತ್ಯಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ಆಲೋಚನಾ ಶಕ್ತಿಯಿಂದ ಯೋಜನೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಡಾ. ಶಕುಂತಲಾ ಪಿ. ಹಿರೇಮಠ ಮಾತನಾಡಿ, ಕುಟುಂಬ ನಿರ್ವಹಣೆ ಜತೆಗೆ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಂಡ ಆದರ್ಶ ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದಾರೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ನಿರಂತರ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿದ್ದರೆ ಸಮಾಜ ಸಹ ಸ್ವಸ್ಥವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಯೋಜನೆ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ, ಮುಖಂಡರಾದ ಕಲಸೆ ಚಂದ್ರಪ್ಪ, ಕೆ.ಹೊಳೆಯಪ್ಪ, ರಮೇಶ್, ಶಾಂತಾ ನಾಯಕ್ ಉಪಸ್ಥಿತರಿದ್ದರು.