

ಕಲಾದಗಿ: ಶಿಕ್ಷಣದಲ್ಲಿ ಪಾಠದೊಂದಿಗೆ ಆಟಕ್ಕೂ ಬಹಳ ಮಹತ್ವವಿದ್ದು, ದೈಹಿಕ ಶಿಕ್ಷಕರು ಮಕ್ಕಳನ್ನು ಆಟೋಟದಲ್ಲಿ ತೊಡಗಿಸಿ ಅವರನ್ನು ಹೆಮ್ಮೆಯ ಕ್ರೀಡಾಪಟುವನ್ನಾಗಿಸುವಲ್ಲಿ ಮುತುವರ್ಜಿ ವಹಿಸಬೇಕೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಸಮೀಪದ ಖಜ್ಜಿಡೋಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಲಾದಗಿ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮಣ್ಣಿನ ಮುದ್ದೆ ಇದ್ದಂತೆ. ಕುಂಬಾರ ಮಣ್ಣಿನ ಮುದ್ದೆಗೆ ಆಕಾರ ಕೊಟ್ಟು ಅದನ್ನು ಸುಂದರವಾಗಿಸುವಂತೆ ಮಕ್ಕಳಿಗೆ ಸಂಸ್ಕಾರ, ಶಿಸ್ತು, ಸಮಯಪ್ರ ಪ್ರಜ್ಞೆ, ಒಳ್ಳೆಯ ಗುಣ ಕಲಿಸಬೇಕು.
ಭಾರತದ ಭವ್ಯ ಭವಿಷ್ಯ ರೂಪಿಸುವ ಮಕ್ಕಳನ್ನು ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಇದನ್ನೂ ಓದಿ: ಮಕ್ಕಳಿಗೆ ಪಾಲಕರು ಸಂಸ್ಕಾರ ನೀಡಲಿ
ಸಮಾಜದಲ್ಲಿ ಶಿಕ್ಷಕರಿಗೆ ಬಹಳ ಗೌರವವಿದ್ದು, ಸಮರ್ಥವಾದ ಸಮಾಜ, ದೇಶ ಕಟ್ಟುವಲ್ಲಿ ಪೂರಕವಾಗಿ ಸೇವೆ ಮಾಡಬೇಕಿದೆ ಎಂದರು.
ತಾಲೂಕು ದೈಹಿಕ ಪರಿವೀಕ್ಷಕ ಆರ್.ಆರ್. ಪಾಟೀಲ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮಾದರ, ಪಿಕೆಪಿಎಸ್ ಅಧ್ಯಕ್ಷ ಗಿರೀಶ ಶಿರೋಳ, ಸಿಆರ್‌ಪಿ ಮಂಜುನಾಥ ಹೆಡಗಿ, ಮುಖಂಡರಾದ ಬಸವರಾಜ ಸಂಶಿ, ಬಿ.ವಿ. ವಾಸನದ, ರಾಮಣ್ಣ ವಾಸನದ, ವೆಂಕಟೇಶ ರಂಗಣ್ಣವರ, ಪಾಂಡಪ್ಪ ಜನವ್ವಗೋಳ, ವೆಂಕಟೇಶ ಹುಣಸಿಕಟ್ಟಿ, ಬಿ.ವಿ. ಪಾಟೀಲ, ಹನುಮಂತ ಅರಕೇರಿ, ಬಸವರಾಜ ಮಂಟೂರ, ವೆಂಕಣ್ಣ ಜೋಗಿನ ಇತರರಿದ್ದರು. ಶಿಕ್ಷಕ ಐ.ಡಿ. ಹಿರೇಮಠ ನಿರೂಪಿಸಿ, ವಂದಿಸಿದರು.
ಎಚ್‌ಎಂಗಳ ಮೇಲೆ ಕ್ರಮ ಕೈಗೊಳ್ಳಿ: ಸರಿಯಾಗಿ ಶಾಲೆಗೆ ಬಾರದ ಖಜ್ಜಿಡೋಣಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಬಿ.ವಿ. ಹೋಟಗರ ಹಾಗೂ ಕ್ರೀಡಾಕೂಟಕ್ಕೆ ಮಕ್ಕಳನ್ನು ಕರೆತರಲು ಅಶಿಸ್ತು ತೋರಿದ ಕಲಾದಗಿ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಮುಖ್ಯಶಿಕ್ಷಕ ಹಾಗೂ ಶಿಕ್ಷಕಿಯರ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ವರದಿ ನೀಡುವಂತೆ ತಾಲೂಕು ದೈಹಿಕ ಪರಿವೀಕ್ಷಕ ಆರ್.ಆರ್. ಪಾಟೀಲ, ಸಿಆರ್‌ಪಿ ಮಂಜುನಾಥ ಹೆಡಗಿ ಅವರಿಗೆ ಶಾಸಕ ಪಾಟೀಲ ಸೂಚಿಸಿದರು. ಬರೀ ಸಂಬಳಕ್ಕಾಗಿ ಕೆಲಸ ಮಾಡಬೇಡಿ, ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ಎಂದು ತಿಳಿಸಿದರು.