

ಬೆಟ್ಟದಪುರ: ಪ್ರಕೃತಿ ಹಾಗೂ ಪರಿಸರದಿಂದ ಆನಂದವನ್ನು ಅನುಭವಿಸಿದರೆ ಸಾಲದು, ಅದರ ರಕ್ಷಣೆಯನ್ನು ಮಾಡುವುದರ ಮೂಲಕ ನಾವು ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ವಲಯ ಅರಣ್ಯಾಧಿಕಾರಿ ಕಿರಣ್‌ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವನ ಮಹೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಸರ್ಕಾರ ಪರಿಸರ ಸಂರಕ್ಷಣೆಗೆ ಅರಣ್ಯ ಇಲಾಖೆಯ ಆಶ್ರಯದಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.
ಬೆಟ್ಟದಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿ.ಎಲ್.ಸೋಮಶೇಖರ್ ಮಾತನಾಡಿ, ಭೂಮಿ ನಮ್ಮ ಆಸ್ತಿ ಅಲ್ಲ. ನಾವು ಭೂಮಿಯ ಆಸ್ತಿ ಆಗಬೇಕು ಆ ಮೂಲಕ ಪರಿಸರ ಸಂರಕ್ಷಿಸಲು ಟೊಂಕ ಕಟ್ಟಿ ನಿಲ್ಲಬೇಕು. ಪರಿಸರ ಮನುಷ್ಯನ ಸಂಗಾತಿ, ಅವನು ಉತ್ತಮ ಆರೋಗ್ಯವಂತರಾಗಿ ಜೀವಿಸಬೇಕಾದರೆ ಅವನ ಸುತ್ತಲಿನ ಪರಿಸರ ಉತ್ತಮವಾಗಿರಬೇಕು. ಆದ್ದರಿಂದ ಗಿಡ, ಮರಗಳನ್ನು ಬೆಳೆಸುವುದು ಕೇವಲ ಅರಣ್ಯ ಇಲಾಖೆ ಕೆಲಸ ಎಂದು ಭಾವಿಸದೆ ನಾವು ನಮ್ಮ ಸುತ್ತಮುತ್ತಲಿನಲ್ಲಿ ಒಳ್ಳೆಯ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು. ಉತ್ತಮ ಪರಿಸರವಿದ್ದರೆ ಪ್ರಾಕೃತಿಕ ಅಸಮತೋಲನವನ್ನು ತಪ್ಪಿಸಲು ಸಾಧ್ಯ. ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಲಾಯಿತು. ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಅಯ್ಯರ್, ಉಪವಲಯ ಅರಣ್ಯ ಅಧಿಕಾರಿ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.