ಜನಸ್ನೇಹಿ ಪೊಲೀಸ್​ ಸೇವೆಗೆ ಒತ್ತು

klr sp phone in,webp
Published on

ಕೋಲಾರ: ಅಪರಾಧ ತಡೆ, ಅಕ್ರಮವಾಗಿ ಮದ್ಯ ಮಾರಾಟ, ಕೈಗಾರಿಕೆ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುವ ಜತೆಗೆ ಪಾರ್ಕಿಂಗ್​ ಸಮಸ್ಯೆ, ಪ್ರವಾಸಿ ಸ್ಥಳಗಳಲ್ಲಿ ಸುರಕ್ಷತೆ ಸೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಇಲಾಖೆಯಿಂದ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ತಿಳಿಸಿದರು.

ನಂ&1 ದಿನ ಪತ್ರಿಕೆ "ವಿಜಯವಾಣಿ'ಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ೋನ್​ ಇನ್​ನಲ್ಲಿ ದೂರವಾಣಿ ಕರೆಗಳಿಗೆ ಸಮಾಧಾನಚಿತ್ತದಿಂದಲೇ ಉತ್ತರಿಸಿ, ಸಾರ್ವಜನಿಕರ ಗೊಂದಲಕ್ಕೆ ತೆರೆ ಎಳೆದರು.

ಇಲಾಖೆ ರೂಪಿಸುವ ಕಾನೂನಿನ ಜತೆಗೆ ಸಾರ್ವಜನಿಕರು ಕೂಡ ಪೊಲೀಸ್​ ಸ್ನೇಹಿಯಾದರೆ ಸಮಾಜದಲ್ಲಿ ಶಾಂತಿ ಕಾಪಾಡಲು ಸಾಧ್ಯ ಎಂದು ಮಾತು ಆರಂಭಿಸಿದ ಎಸ್​ಪಿ, ಸಮಸ್ಯೆ ಹೇಳಿಕೊಂಡು ಬರುವ ದೂರುದಾರರಿಗೆ ಠಾಣೆ ಹಂತದಲ್ಲೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ ಆಯೋಜಿಸಲಾಗುತ್ತಿದೆ ಎಂದರು.

ಠಾಣೆಗಳಲ್ಲಿ ಕ್ಯೂಆರ್​ ಕೋಡ್​ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಪ್ರಕರಣ ಇತ್ಯರ್ಥದ ಬಗ್ಗೆ ಮಾಹಿತಿ ಪೆದುಕೊಳ್ಳಬಹುದು. ಆರಕ್ಷಕ ದಿನ ಕಾರ್ಯಕ್ರಮದಡಿ ಇಲಾಖೆಯ ಅಧಿಕಾರಿಗಳು ಶಾಲೆ, ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಅಪರಾಧ ಚಟುವಟಿಕೆ, ಮಾದಕ ವಸ್ತುಗಳ ಮಾರಾಟ, ಸೇವನೆ, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸಾರ್ವಜನಿಕರ ಮನವಿ ಮೇರೆಗೆ ಆಯ್ದ ಸ್ಥಳಗಳಿಗೆ ಬೀಟ್​ ವ್ಯವಸ್ಥೆಯನ್ನೂ ಹೆಚ್ಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

* ಬೆಟ್ಟಿಂಗ್​ ಮೇಲೆ ತೀವ್ರ ನಿಗಾ

ಈಗಾಗಲೇ ಐಪಿಎಲ್​ ಶುರುವಾಗಿದ್ದು, ಬೆಟ್ಟಿಂಗ್​ ದಂಧೆ ನಿಯಂತ್ರಿಸಲು ಇಲಾಖೆ ಮುಂದಾಗಿದೆ. ದಂಧೆ ನಡೆಸುವವರ ಮಾಹಿತಿ ಪಡೆದುಕೊಂಡಿದ್ದು, ಅವರಿಂದ ಬಾಂಡ್​ ಬರೆಸಿಕೊಳ್ಳಲಾಗಿದೆ. ಒಂದು ವೇಳೆ ಅವರು ಬೆಟ್ಟಿಂಗ್​ ನಡೆಸಿದರೆ ಬಾಂಡ್​ ಹಣ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದರು. ಸಾರ್ವಜನಿಕರು ದೂರು ನೀಡಿದರೂ ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು, ಕ್ರಮವಹಿಸಲಾಗುವುದು ಎಂದು ತಿಳಿಸಿದರು.

* 4000 ಸಿಸಿ ಕ್ಯಾಮರಾ ಅಳವಡಿಕೆ

ಕೋಲಾರ, ಮುಳಬಾಗಿಲು ನಗರ ಹಾಗೂ ಮಾಲೂರು, ಶ್ರೀನಿವಾಸಪುರ ಪುರಸಭೆಗಳ ವ್ಯಾಪ್ತಿಯಲ್ಲಿ 4000 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನೂ ಹೆಚ್ಚಿಗೆ ಕ್ಯಾಮರಾ ಅಳವಡಿಸಲು ವರ್ತಕರಿಗೆ ಮನವಿ ಮಾಡಲಾಗಿದ್ದು, ಅಗತ್ಯವಿರುವೆಡೆ ಅಳವಡಿಸಲಾಗುವುದು. ಪರಿಣಾಮ ಕೋಲಾರ ಜಿಲ್ಲಾ ಪೊಲೀಸ್​ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ನಿಯಂತ್ರಣಕ್ಕೆ ಬಂದಿವೆ. ಸಂಪೂರ್ಣವಾಗಿ ಅಪರಾಧ ತಡೆಗಟ್ಟಲು ಕಠಿಣ ಕ್ರಮವಹಿಸಲಾಗಿದೆ. ಜಿಲ್ಲೆಗೆ ಭೇಟಿ ನೀಡುವ ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ ನಿಗಾವಹಿಸಲಾಗುವುದು. ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವವರನ್ನು ಅಗಾಗ ವಿಚಾರಣೆ ನಡೆಸಿ, ಎಚ್ಚರಿಕೆ ನೀಡಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.

* ಕಾರ್ಮಿಕರಿಗೆ ಭದ್ರತೆ ಮುಖ್ಯ

ಕೋಲಾರ ಜಿಲ್ಲೆಯ ಮಾಲೂರು, ನರಸಾಪುರ, ವೇಮಗಲ್​ ಭಾಗದಲ್ಲಿ ಹೆಚ್ಚಾಗಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಹೊರ ಜಿಲ್ಲೆ, ರಾಜ್ಯಗಳಿಂದ ಕಾರ್ಮಿಕರು ಬಂದಿದ್ದಾರೆ. ವಸತಿಗಾಗಿ ನಗರ, ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಪಿಜಿಗಳ ಮಾಲೀಕರಿಗೆ ಬಾಡಿಗೆ ಮುಖ್ಯವಾಗಿದ್ದು, ಭದ್ರತೆ ಗ್ಯಾರಂಟಿ ನೀಡಿಲ್ಲ. ಈ ಬಗ್ಗೆ ಕ್ರಮವಹಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಎಸ್ಪಿ ನಿಖಿಲ್​ ಹೇಳಿದರು.

* ವೀಲಿಂಗ್​ ಮಾಡಿದರೆ ಹೆಡೆಮುರಿ ಕಟ್ಟುವುದು ಗ್ಯಾರಂಟಿ

ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂನೆ ತಡೆಯಲು ಸಾರ್ವಜನಿಕರು ಸಹಹರಿಸಬೇಕು. ಜೀವ ರಕ್ಷಣೆಗಾಗಿ ಹೆಲ್ಮೆಟ್​ ಧರಿಸುವುದು ಕಡ್ಡಾಯ. ಏಕಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಯ ನಿಗದಿಪಡಿಸಲಾಗುವುದು. ಪುಂಡರು ವೀಲಿಂಗ್​ ಮಾಡುವುದರ ಬಗ್ಗೆ ನಿಗಾವಹಿಸಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಹೆಡೆಮುರಿ ಕಟ್ಟಲಾಗುತ್ತಿದೆ ಎಂದು ಬಿ.ನಿಖಿಲ್​ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net