

ನವದೆಹಲಿ: ವಿ.ಡಿ.ಸಾವರ್ಕರ್ ಅವರಿಗೆ ಸಂಬಂಧಿಸಿದ ವಿಷಯವನ್ನು ತನ್ನ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿ ಸೇರಿಸುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಮಾಜಿ ನ್ಯಾಯಾಧೀಶರು, ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಸೇನಾಧಿಕಾರಿಗಳ ಗುಂಪು ಬುಧವಾರ ಬೆಂಬಲ ವ್ಯಕ್ತಪಡಿಸಿದೆ. ಭಾರತದ ರಾಷ್ಟ್ರೀಯ ಚಳವಳಿಯ ಇತಿಹಾಸದ ನ್ಯಾಯಯುತ ನಿರೂಪಣೆಗೆ ಇದು ಅಗತ್ಯವಿದೆ ಎಂದು ಈ ಗುಂಪು ಪ್ರತಿಪಾದಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗುಂಪು, ಕವಿ ಮೊಹಮ್ಮದ್ ಇಕ್ಬಾಲ್ ಅವರನ್ನು ಪಠ್ಯಕ್ರಮದಿಂದ ಕೈಬಿಡುವ ವಿಶ್ವವಿದ್ಯಾನಿಲಯದ ನಿರ್ಧಾರವನ್ನು ಕೂಡ ಬೆಂಬಲಿಸಿದೆ. ಇಕ್ಬಾಲ್ ಬರಹಗಳು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕಲ್ಪನೆಯೊಂದಿಗೆ ಸಂಬಂಧ ಹೊಂದಿವೆ. ಇದು ಭಾರತದ ವಿಭಜನೆಯ ದುರಂತಕ್ಕೆ ಕಾರಣವಾಯಿತು ಎಂಬ ವಾದವನ್ನು ಗುಂಪು ಮುಂದಿಟ್ಟಿದೆ. ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ಕಪಿಮುಷ್ಟಿಯಿಂದ ಭಾರತ ವನ್ನು ಬಿಡಿಸಲು ಈ ದೇಶಕ್ಕಾಗಿ ಪ್ರಾಣ ತೆತ್ತ ಅನೇಕ ಐತಿಹಾಸಿಕ ವ್ಯಕ್ತಿಗಳಿಗೆ ಘೊರ ಅನ್ಯಾಯ ಮಾಡಲಾಗಿದೆ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಶಶಾಂಕ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಎಸ್.ಎನ್.ಧಿಂಗ್ರಾ, ಎಂ.ಸಿ. ಗಾರ್ಗ್, ಆರ್. ಎಸ್. ರಾಥೋಡ್ ಸೇರಿ 123 ಪ್ರಮುಖರು ಹೇಳಿಕೆ ನೀಡಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಸಾವರ್ಕರ್ ಅವರ ಕೊಡುಗೆ ಮತ್ತು ತತ್ವಶಾಸ್ತ್ರವನ್ನು ಪ್ರಸ್ತುತ ಸೇರಿಸುವವರೆಗೂ, ಕಾಂಗ್ರೆಸ್-ಎಡಪಂಥೀಯ ಪ್ರಭಾವದಲ್ಲಿರುವ ವಿಶ್ವವಿದ್ಯಾನಿಲಯಗಳು ನಮ್ಮ ಮಹಾನ್ ತಾಯ್ನಾಡಿಗೆ ಅವರ ಕೊಡುಗೆ ಮತ್ತು ಆಲೋಚನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿರುವುದು ದುರದೃಷ್ಟಕರ ಎಂದು ಹೇಳಿಕೆಯಲ್ಲಿ ಟೀಕಿಸಲಾಗಿದೆ. ಸಾವರ್ಕರ್ ಅವರು ದಲಿತ ಹಕ್ಕುಗಳನ್ನು ಪ್ರತಿಪಾದಿಸಿದರು. ಜಾತಿ ನಿಮೂಲನೆಗೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ಕೆಲಸ ಮಾಡಿದರು. ಭಾರತವನ್ನು ಒಂದೇ ರಾಷ್ಟ್ರವಾಗಿ ನೋಡುವುದು ಅಖಂಡ ಭಾರತದ ಸಿದ್ಧಾಂತದ ಕೇಂದ್ರಬಿಂದುವಾಗಿದೆ ಎಂದು ಅದು ಹೇಳಿದೆ.
ಸಾರೆ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ... ಎಂಬ ಹಾಡನ್ನು ಬರೆದ ಕವಿ ಇಕ್ಬಾಲ್ ಅವರು ದೇಶದಲ್ಲಿ ಪ್ರತ್ಯೇಕತೆಯ ಬೀಜಗಳನ್ನು ಬಿತ್ತಿದ ವಿಭಜಕ ವ್ಯಕ್ತಿ. ಅಂದಿನ ಪಂಜಾಬ್ ಮುಸ್ಲಿಂ ಲೀಗ್ನ ಅಧ್ಯಕ್ಷರಾಗಿ, ಇಕ್ಬಾಲ್ ಅವರು ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಉದ್ದೇಶವನ್ನು ಪ್ರತಿಪಾದಿಸಿದರು. ಸಾರೆ ಜಹಾ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಬದಲು ಚಿನೋ-ಒ-ಅರಬ್ ಹಮಾರಾ, ಹಿಂದೂಸ್ತಾನ್ ಹಮಾರಾ, ಮುಸ್ಲಿಂ ಹೈ ಹಮ್ ವತನ್ ಹೈ ಸಾರಾ ಜಹಾ ಹಮಾರಾ ಎಂದು ಬದಲಿಸಿದರು ಎಂದು ಹೇಳಿಕೆಯಲ್ಲಿ ಟೀಕಿಸಲಾಗಿದೆ.