

ಮುಂಬೈ: ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ(Emergency) ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಆದರೆ ಇದರೊಂದಿಗೆ ಸೆನ್ಸಾರ್ ಮಂಡಳಿ ಕೆಲವು ಷರತ್ತುಗಳನ್ನೂ ಹಾಕಿದೆ. ಎಮರ್ಜೆನ್ಸಿ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಹಾಗೂ ಚಿತ್ರ ನಿರ್ಮಾಪಕರ ನಡುವೆ ಜಟಾಪಟಿ ನಡೆಯುತ್ತಿರುವುದು ಗೊತ್ತೆ ಇದೆ. ಇದೀಗ ಸೆನ್ಸಾರ್ ಮಂಡಳಿ ಕೂಡ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಬೇಡಿಕೆ ಇಟ್ಟಿದೆ.
ಬಾಂಬೆ ಹೈಕೋರ್ಟ್ ಈ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಕಟ್ ಮಾಡಿದರೆ ಮಾತ್ರ ಚಿತ್ರ ಬಿಡುಗಡೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಕಂಗನಾ ರಣಾವತ್ ತಮ್ಮ ಸಂದರ್ಶನವೊಂದರಲ್ಲಿ 'ಚಿತ್ರದ ಅನ್‌ಕಟ್ ಆವೃತ್ತಿಯನ್ನು ಬಿಡುಗಡೆ ಮಾಡಲು ನಾನು ನಿರ್ಧರಿಸಿದ್ದೇನೆ. ದೃಶ್ಯಗಳನ್ನು ಕಟ್ ಮಾಡದೆ ಸಿನಿಮಾ ಬಿಡುಗಡೆ ಮಾಡಲು ನಾನು ನ್ಯಾಯಾಲಯದಲ್ಲಿ ಹೋರಾಡುತ್ತೇನೆ ಎಂದು ಹೇಳಿದ್ದರು. ಆದರೆ ಇದೀಗ ಸೆನ್ಸಾರ್ ಮಂಡಳಿಯ ಸೂಚನೆ ಮೇರೆಗೆ ಚಿತ್ರದ ಸಹ ನಿರ್ಮಾಪಕರಾದ ಜೀ ಸ್ಟುಡಿಯೋ ಸಿನಿಮಾದಲ್ಲಿನ ದೃಶ್ಯ ಕಟ್ ಮಾಡುವ ಬಗ್ಗೆ ನಿರ್ಧರಿಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 25 ರೊಳಗೆ ಚಿತ್ರದ ಬಿಡುಗಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಈ ಹಿಂದೆ ಸೆನ್ಸಾರ್ ಮಂಡಳಿಗೆ ಹೈಕೋರ್ಟ್ ಸೂಚಿಸಿತ್ತು. ಮುಂದಿನ ವಿಚಾರಣೆ ಸೆಪ್ಟೆಂಬರ್ 30ರಂದು ನಡೆಯಲಿದೆ. ಅಂದರೆ ಇದಕ್ಕೂ ಮುನ್ನ ಸೆನ್ಸಾರ್ ಮಂಡಳಿ ಮತ್ತು ಮೇಕರ್‌ಗಳ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಅಗತ್ಯವಾಗಿದೆ.
ಎಲ್ಲಾ ಬದಲಾವಣೆಗಳನ್ನು ಸ್ವೀಕರಿಸಿ: ಚಿತ್ರದ ಬಿಡುಗಡೆಗೆ ಅವರು ಸೂಚಿಸಿರುವ ಎಲ್ಲಾ ಮಾರ್ಪಾಡುಗಳನ್ನು ಕಾರ್ಯಗತಗೊಳಿಸಲು ಆಯ್ಕೆ ಮಾಡಬಹುದು.
ಬದಲಾವಣೆಗಳನ್ನು ಸಮಾಲೋಚಿಸಿ: ಅವರು ಅಸಮಂಜಸವೆಂದು ಭಾವಿಸುವ ಕೆಲವು ದೃಶ್ಯಗಳ ಬದಲಾವಣೆಗಳನ್ನು ಸ್ವೀಕರಿಸಲು ಆಯ್ಕೆ ಮಾಡಬಹುದು.
ಕಾನೂನು ಹೋರಾಟ: CBFC ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು, ಅಗತ್ಯವಿರುವ ಕಡಿತ ಮತ್ತು ಬದಲಾವಣೆಗಳ ವಿರುದ್ಧ ವಾದಿಸಬಹುದು.(ಏಜೆನ್ಸೀಸ್)