

ಮೂಗೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
12 ನಿರ್ದೇಶಕರ ಸ್ಥಾನಕ್ಕೆ ನಡೆದ ಮತದಾನದಲ್ಲಿ ಎಂ.ಚಂದ್ರಶೇಖರ್ ಬಣಕ್ಕೆ ಏಳು, ಜನ್ನೂರು ಬಸವಣ್ಣಪ್ಪ ಬಣದ 6 ಜನ ನಿರ್ದೇಶಕರಾಗಿ ಆಯ್ಕೆಯಾದರು.
ಎಂ.ಚಂದ್ರಶೇಖರ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ.ಮಹೇಂದ್ರಕುಮಾರ್(ಬಾನು) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ವೈ.ಬಿ.ಜಯಮ್ಮ ಸ್ಪರ್ಧಿಸಿದ್ದರೆ, ಜನ್ನೂರು ಬಸವಣ್ಣಪ್ಪ ಬಣದಿಂದ ಹಾಲಿ ಅಧ್ಯಕ್ಷ ಎ.ಬಿ.ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷ ಎಂ.ಶಿವಮೂರ್ತಿ ಸ್ಪರ್ಧಿಸಿದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಬಿ.ಮಹೇಂದ್ರಕುಮಾರ್ ಹಾಗೂ ಉಪಾಧ್ಯಕ್ಷರಾಗಿ ವೈ.ಬಿ.ಜಯಮ್ಮ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೇಮಂತ್‌ಕುಮಾರ್ ಘೋಷಿಸಿದರು.
ಜನ್ನೂರು ಬಸವಣ್ಣಪ್ಪ ಬಣದ ಏಳು ಜನರ ಪೈಕಿ ಒಬ್ಬರು ಅಡ್ಡ ಮತದಾನ ಮಾಡಿದರು. ಜತೆಗೆ ತಾಲೂಕು ಸೂಪರ್‌ವೈಸರ್‌ಗೆ ಮತ ಚಲಾವಣೆಯ ಅವಕಾಶವಿದ್ದ ಕಾರಣ ಅದೂ ಎಂ.ಚಂದ್ರಶೇಖರ್ ಬಣದ ಪಾಲಾಯಿತು. ಇದರಿಂದ ಚಂದ್ರಶೇಖರ್ ಬಣಕ್ಕೆ 7, ಜನ್ನೂರು ಬಸವಣ್ಣಪ್ಪ ಬಣಕ್ಕೆ 6 ಮತ ಲಭಿಸಿದಂತಾಯಿತು.
ಕಳೆದ 25 ವರ್ಷಗಳಿಂದ ಸಂಘದ ಆಡಳಿತ ಜನ್ನೂರು ಬಸವಣ್ಣಪ್ಪ ಅವರ ಹಿಡಿತದಲ್ಲಿತ್ತು. ಪ್ರತಿ ಬಾರಿಯೂ ಅವಿರೋಧವಾಗಿಯೇ ಆಯ್ಕೆಯಾಗುತ್ತಿದ್ದರು. ಅದನ್ನು ಕೊನೆಗೊಳಿಸಿ ಆಡಳಿತ ಚುಕ್ಕಾಣಿ ಹಿಡಿಯುವ ಮೂಲಕ ಎಂ.ಚಂದ್ರಶೇಖರ್ ಬಣ ಹೊಸ ಶಕೆ ಸೃಷ್ಟಿಸಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಎನ್.ಮೋಹನ್, ಎಂ.ದೇವರಾಜು, ಗ್ರಾಪಂ ಸದಸ್ಯರಾದ ಮೋಹನ್‌ಕುಮಾರ್, ಎಂ.ಎನ್.ರಾಜು, ಮುಖಂಡರಾದ ಅರವಿಂದ್, ನಾಗೇಂದ್ರ, ರಮೇಶ್‌ನಾಯಕ್, ಆರ್.ಮಹದೇವಸ್ವಾಮಿ, ಶಿವಕುಮಾರ್ ಮತ್ತಿತರರಿದ್ದರು.