ಸಂಪಾದಕೀಯ | ಜಲಸಂಕಷ್ಟ ನಿವಾರಿಸಿ

ವಿಜಯವಾಣಿ
Published on

ಬೇಸಿಗೆಯ ಬೇಗೆ ಹೆಚ್ಚಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್​ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಬಿಸಿಲಿನ ಪ್ರಖರತೆಯ ಜತೆಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಂಡಿದೆ. ಮಹಿಳೆಯರು, ಮಕ್ಕಳು, ಯುವಕರು ಕೃಷಿ ಕೆಲಸಗಳನ್ನು ಬದಿಗೊತ್ತಿ ನೀರು ತರಲೆಂದೇ ದೂರದ ಪ್ರದೇಶದವರೆಗೂ ನಡೆದುಕೊಂಡು ಹೋಗುವ ಚಿತ್ರಣಗಳು ಜಲಕ್ಷಾಮದ ಭೀಕರತೆಯನ್ನು ಹೇಳುತ್ತಿವೆ.

ಮಲೆನಾಡಿನ 1500 ಹಾಗೂ ಕಲ್ಯಾಣ ಕರ್ನಾಟಕದ 1,300ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ನಗರಪ್ರದೇಶಗಳಲ್ಲೂ ಸ್ಥಿತಿ ಭಿನ್ನವಾಗಿಲ್ಲ. ಬೆಳಗಾವಿ, ಧಾರವಾಡದಲ್ಲಿ ವಾರಕ್ಕೊಮ್ಮೆ, ಹಾವೇರಿ, ಗದಗ- ಬೆಟಗೇರಿ ಅವಳಿ ನಗರದಲ್ಲಿ 15 ದಿನಕ್ಕೊಮ್ಮೆ, ವಿಜಯಪುರದಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದು, ಜನರ ಪರದಾಟ ಅಷ್ಟಿಷ್ಟಲ್ಲ. ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಕೂಡ ಆಶಾದಾಯಕವಾಗಿದೆ. ಆದರೆ, ಜಲಮೂಲಗಳ ನಿರ್ವಹಣೆಯಲ್ಲಿ ಸ್ಥಳೀಯಾಡಳಿತಗಳು ಮತ್ತು ಜನಪ್ರತಿ ನಿಧಿಗಳು ತೋರಿದ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವುದು ದುರ್ದೈವಕರ. ಜಲಮೂಲಗಳ ನಿರ್ವಹಣೆ ಸರಿಯಾಗಿ ಮಾಡಿದ್ದಲ್ಲಿ ಮತ್ತು ಜಲ ಮರುಪೂರಣ ದಂಥ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿದ್ದಲ್ಲಿ ಇಷ್ಟೊಂದು ಗ್ರಾಮ ಮತ್ತು ಪಟ್ಟಣಗಳು ಬಾಯಾರಿಕೆಯಿಂದ ಪರಿತಪಿಸಬೇಕಾಗುತ್ತಿರಲಿಲ್ಲ.

ಸಂಬಂಧಿತ ವ್ಯವಸ್ಥೆಯಿಂದ ಸಿದ್ಧತೆಯ ಕೊರತೆ ಮತ್ತು ದೂರದೃಷ್ಟಿ ಇಲ್ಲದಿರುವುದು ಈ ಸ್ಥಿತಿಗೆ ಕಾರಣ ಎನ್ನಬಹುದು. ನಗರ ಮತ್ತು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿದ್ದು, ಒಂದೇ ಒಂದು ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ತಲೆದೋರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕುಡಿಯುವ ನೀರಿನ ತುರ್ತು ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ, ಟಾಸ್ಕ್​ಫೋರ್ಸ್​ನಿಂದ ಅನುಮೋದನೆ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತೊಂದರೆಯನ್ನು ಶಾಶ್ವತವಾಗಿ ನೀಗಿಸಲು ಯೋಜನೆ ರೂಪಿಸಬೇಕು.

ಅಗತ್ಯ ಬಿದ್ದರೆ ಮಾತ್ರ ಕೊಳವೆಬಾವಿ ಕೊರೆಯಬೇಕು ಎಂದಿದ್ದಾರೆ. ಮುಖ್ಯಮಂತ್ರಿಗಳ ಸಲಹೆ, ಸೂಚನೆಗಳು ಸೂಕ್ತ ಮತ್ತು ಸಕಾಲಿಕವಾಗಿವೆ. ಆದರೆ, ಮತ್ತೆ ಸಮಸ್ಯೆ ಎದುರಾಗುವುದೇ ಅನುಷ್ಠಾನದ ಹಂತದಲ್ಲಿ. ಅನುದಾನವಿದ್ದರೂ ಯಾವುದೋ ನೆಪವೊಡ್ಡಿ ಸಮಸ್ಯೆಯನ್ನು ಜೀವಂತವಾಗಿ ಇರಿಸಲಾಗುತ್ತದೆ. ಪರಿಣಾಮ, ಜನರಿಗೆ ಬೇಸಿಗೆ ಎಂಬುದು ಶಾಪವಾಗಿ ಕಾಡುವಂಥ ಸ್ಥಿತಿ ಸೃಷ್ಟಿಯಾಗಿದೆ. ಸ್ಥಳೀಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಜನರ ಸಂಕಷ್ಟ ನಿವಾರಿಸಲು ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಪ್ರಯತ್ನ ಮಾಡಬೇಕು. ಇಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೂ ಅಷ್ಟೇ ಮುಖ್ಯ. ಇವರು ಸಮಸ್ಯೆಯ ಗಂಭೀರತೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಸಂಬಂಧಿತ ಕೆಲಸ ವ್ಯವಸ್ಥಿತವಾಗಿ ನಡೆಯುವಂತೆ ಮಾಡಬೇಕು. ಪರಿಸ್ಥಿತಿ ಗಂಭೀರವಾಗಿರುವ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಮಳೆಗಾಲದ ಮುನ್ನ ಜಲಮೂಲಗಳನ್ನು ಸ್ವಚ್ಛಗೊಳಿಸಿ, ಜಲಸಂಗ್ರಹಕ್ಕೆ ಅನುವು ಮಾಡಿಕೊಟ್ಟರೆ ಸಮಸ್ಯೆಯ ತೀವ್ರತೆಯನ್ನು ಖಂಡಿತವಾಗಿ ತಗ್ಗಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net