ಬಾಲ್ಯವಿವಾಹ ನಿರ್ಮೂಲನೆಗೆ ಶ್ರಮವಹಿಸಿ

CTD WORKSHOP---
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣಗಳ ಪಿಡುಗು ನಿರ್ಮೂಲನೆಗೆ ಶ್ರಮಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಎಂ.ವಿಜಯ್ ಹೇಳಿದರು.

ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇತರ ಸಂಘಟನೆಗಳ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆ ಕಾವಲು ಸಮಿತಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಮಟ್ಟದ ಅಧಿಕಾರಿ, ಸಿಬ್ಬಂದಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳ ಗ್ರಾಮಸಭೆ, ಮಹಿಳಾ ಮತ್ತು ಮಕ್ಕಳ ಸಂರಕ್ಷಣೆ ಕುರಿತ ಸಭೆಗಳಲ್ಲಿ ಭಾಗವಹಿಸಿ, ಪೋಕ್ಸೋ ಹಾಗೂ ಬಾಲ್ಯವಿವಾಹ ಪ್ರಕರಣ ನಡೆಯದಂತೆ ಗ್ರಾಮ ಮಟ್ಟದಲ್ಲಿ ಬುಡಸಮೇತ ಕಿತ್ತೊಗೆಯಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಪೋಕ್ಸೋ ಮತ್ತು ಬಾಲ್ಯವಿವಾಹ ಪ್ರಕರಣಗಳ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ, ಸಲಹೆ ಸೂಚನೆ ನೀಡುತ್ತಿದೆ. ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರಿವು ಮೂಡಿಸುತ್ತಿದೆ. ಗ್ರಾಮಮಟ್ಟದ ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ ಇದೆ. ಪ್ರಕರಣ ನಡೆದು 3-4 ದಿನಗಳಾದರೂ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದರು.

ಮೇಲಧಿಕಾರಿಗಳಿಗೆ ಮಾಹಿತಿ ನೀಡದೇ ನಿರ್ಲಕ್ಷೃ ವಹಿಸುವುದು ಕಂಡು ಬಂದಿದೆ. ಇನ್ನು ಮುಂದೆ ಪ್ರಕರಣಗಳ ವರದಿ ನೀಡದ ಅಧಿಕಾರಿಗಳನ್ನೇ ನೇರ ಹೊಣೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಸಕ್ತ ವರ್ಷದಲ್ಲಿ ದೇಶದಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳನ್ನು ಕಳ್ಳ ಸಾಗಾಣಿಕೆ ಜಾಲದಿಂದ ರಕ್ಷಿಸಲಾಗಿದೆ. ಬಿಗಿಯಾದ ಕಾನೂನುಗಳನ್ನು ರಚಿಸಲಾಗಿದೆ ಎಂದು ನ್ಯಾಯಾ ಧೀಶರು ತಿಳಿಸಿದರು.

ಜಿಪಂ ಉಪ ಕಾರ‌್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ತಡೆಗೆ ಹೆಚ್ಚಿನ ಅರಿವು ಮೂಡಿಸಬೇಕು. ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು. ಮಕ್ಕಳ, ಮಹಿಳಾ, ತುರ್ತು ಸ್ಪಂದನಾ ಸಹಾಯವಾಣಿಗಳ ಸಂಖ್ಯೆಗಳ ಕುರಿತು ಗೋಡೆಬರಹದ ಮೂಲಕ ಜನರಿಗೆ ಅರಿವು ಮೂಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ, ಲೈಂಗಿಕ ಶೋಷಣೆ, ಭಿಕ್ಷಾಟನೆ, ಜೀತ, ಬಾಲಕಾರ್ಮಿಕ, ಅಂಗಾಂಗ ಕಸಿ, ಬಾಲ್ಯವಿವಾಹಕ್ಕಾಗಿ ಮಹಿಳೆ ಹಾಗೂ ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಪಡುತ್ತಾರೆ ಎಂದರು.

ಬಿಗಿ ಕಾನೂನು, ಜಾಗೃತಿ ಹಾಗೂ ಪೊಲೀಸ್ ಕಾರ್ಯಾಚರಣೆಗಳ ಫಲವಾಗಿ ಇತ್ತೀಚಿನ ದಿನಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಕಡಿಮೆಯಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿ ಇದೆ. 14ರಿಂದ 18ವರ್ಷದ ಮಕ್ಕಳು ಕಾಣೆಯಾದರೆ ಗ್ರಾಪಂಗೆ ತಿಳಿಸಿ, ಪತ್ತೆ ಕಾರ್ಯ ಮಾಡಬೇಕು. ಬಾಲ್ಯವಿವಾಹ ತಡೆ ಎಲ್ಲ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ವೀಣಾ ಪ್ರತಿಜ್ಞಾವಿಧಿ ಬೋಧಿಸಿದರು. ಎಎಸ್‌ಪಿ ಉಮೇಶ್, ಈಶ್ವರನಾಯ್ಕ, ಡಿಡಿಪಿಯು ಕೆ.ತಿಮ್ಮಯ್ಯ, ಡಿಡಿಪಿಐ ಎಂ.ಆರ್.ಮಂಜುನಾಥ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಶೀಲಾ, ಕಾರ್ಮಿಕ ಅಧಿಕಾರಿ ಅನಿಲ ಬಾಲಚಂದ್ರ ಬಗಟಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net